ವಿಧಾನಸಭಾ ಚುನಾವಣೆಯಲ್ಲಿ ಕಟೌಟ್, ಬ್ಯಾನರ್ ಹಾಗೂ ಬಂಟಿಂಗ್ಸ್ ಮೊದಲಾದ ಅಬ್ಬರ ಪ್ರಚಾರ ಸಾಮಗ್ರಿಗಳನ್ನು ಬಳಸುವುದಕ್ಕೆ ಚುನಾವಣಾ ಆಯೋಗವು ಕತ್ತರಿ ಹಾಕಿದೆ.
ಚುನಾವಣೆ ಪ್ರಚಾರದಲ್ಲಿ ಹಣದ ಹೊಳೆ ಹರಿಸಿ, ವೃತ್ತ, ಬೀದಿಗಳಲ್ಲಿ ಹಾಗೂ ಇದ್ದ ಕಡೆಗಳಲ್ಲಿ ಬ್ಯಾನರ್, ಬಂಟಿಂಗ್ಸ್ ಕಟ್ಟಿ ಆಳೆತ್ತರದ ಕಟೌಟ್ ಹಾಕುವ ಮೂಲಕ ನಗರದ ಸೌಂದರ್ಯ ಹಾಳುಗೆಡುವುದನ್ನು ತಡೆಯಲು ಚುನಾವಣೆ ಆಯೋಗ ಈ ಕಠಿಣ ಕ್ರಮವನ್ನು ಕೈಗೊಂಡಿದೆ.
ಈ ಮಧ್ಯೆ, ಖಾಸಗಿ ಸ್ವತ್ತಿನ ಮಾಲೀಕರು, ಆಯಾಕ್ಷೇತ್ರದ ಚುನಾವಣೆ ಅಧಿಕಾರಿಯ ಅನುಮತಿ ಪಡೆದು ಖಾಸಗಿ ಜಾಗದಲ್ಲಿ ಕಟೌಟ್, ಬ್ಯಾನರ್ ಹಾಕಲು ಆಯೋಗ ಅನುಮತಿ ನೀಡಿದೆ. ಈ ರೀತಿಯ ನೀತಿಯಿಂದ ಚುನಾವಣಾ ಆಯೋಗವು ಅಭ್ಯರ್ಥಿಗಳ ಪ್ರಚಾರಕ್ಕೆ ಕಡಿವಾಣ ಹಾಕಿರುವುದು ರಾಜಕೀಯ ಪಕ್ಷಗಳ ಚಿಂತೆಗೆ ಎಡೆ ಮಾಡಿಕೊಟ್ಟಿದೆ.
ಇತ್ತೀಚೆಗೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳ ಚುನಾವಣೆಯಲ್ಲಿಯೂ ಅಬ್ಬರದ ಪ್ರಚಾರಕ್ಕೆ ಕಡಿವಾಣ ಹಾಕಿದ್ದ ಚುನಾವಣಾ ಆಯೋಗ ಅದೇ ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸುವಂತೆ ಆದೇಶ ನೀಡಿದೆ. ಈ ಬೆಳವಣಿಗೆಯಿಂದ ಸಾರ್ವಜನಿಕರಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿದೆ.
|