ತಮಿಳುನಾಡು ಮತ್ತು ಕರ್ನಾಟಕ ನಡುವಿನ ಹೊಗೇನಕಲ್ ಯೋಜನೆ ವಿವಾದ ದಿನಹೋದಂತೆ ಜಟಿಲಗೊಳ್ಳುತ್ತಾ ಸಾಗುತ್ತಿದೆ. ಯೋಜನೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಕೂಡ ರಾಜ್ಯಾದ್ಯಂತ ಪ್ರತಿಭಟನೆ ಮುಂದುವರೆಸಿದ್ದಾರೆ.
ಇಂದು(ಗುರುವಾರ) ಗುಲ್ಬರ್ಗಾದಲ್ಲಿ ಕರವೇ ಕಾರ್ಯಕರ್ತರು ತಮಿಳುನಾಡಿನ ಐದು ಬಸ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ತಮಿಳುನಾಡು ವಿರುದ್ಧ ಘೋಷಣೆಗಳನ್ನು ಕೂಗಿ, ಕರುಣಾನಿಧಿಯವರ ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು. ಈಗಾಗಲೇ ಏಪ್ರಿಲ್ 10ರಂದು ನಿಗದಿಯಾಗಿರುವ ಕರ್ನಾಟಕ ಬಂದ್‌ಗೆ 300ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಈ ನಡುವೆ ಕನ್ನಡ ಚಿತ್ರರಂಗ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ರಾಷ್ಟ್ತ್ರಮಟ್ಟದಲ್ಲಿ ಸಮಸ್ಯೆ ಇತ್ಯರ್ಥವಾಗಬೇಕೆಂದು ತಿಳಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಚಿತ್ರನಟ ವಿಷ್ಣುವರ್ಧನ್ ಹಾಗೂ ಅಂಬರಿಷ್ ಅವರು, ವಿವಾದಕ್ಕೆ ಕಲಾವಿದರನ್ನು ಎಳೆದು ತರುವುದು ಸರಿಯಲ್ಲ. ಕಲಾವಿದರು ಯಾವಾಗಲೂ ರಾಜ್ಯದ ಪರವೇ ನಿಲುವು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ದಕ್ಷಿಣ ಕನ್ನಡದಲ್ಲಿಯೂ ಪ್ರತಿಭಟನೆಯ ಬಿಸಿ ತಟ್ಟಿದ್ದು, ಉಡುಪಿಯಲ್ಲಿ ಕರವೇ ಕಾರ್ಯಕರ್ತರು ತಮಿಳುನಡು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಪ್ರತಿಭಟನೆ ನಡೆಸಿದರು.
|