ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಮಾಜಿ ಸಚಿವ ಎಂ. ಮಹದೇವ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್ ಮತ್ತಿತರು ಬಿಜೆಪಿ ಸೇರುವುದು ಬಹುತೇಕ ಖಚಿತವಾದಂತಾಗಿದೆ.
ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ನಗರದ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಸಮಾಲೋಚನೆ ನಡೆಸಿದ್ದು, ಮಹದೇವ್ ಬಿಜೆಪಿ ಸೇರ್ಪಡೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾತುಕತೆಯ ವಿವರಗಳು ಬಂದಿಲ್ಲವಾದರೂ, ಮಹದೇವು ಅವರು ಬಯಸುವ ಕ್ಷೇತ್ರದಿಂದ ಟಿಕೆಟ್ ಕೊಡಲು ಬಿಜೆಪಿ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜ ನಗರ ಅಥವಾ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆದಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಹಾಗೂ ನಂಜನಗೂಡಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಮಹದೇವು ಹಾಗೂ ಇತರರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗಿನ ಜಟಾಪಟಿಯಿಂದಾಗಿ ಕಾಂಗ್ರೆಸ್ ತ್ಯಜಿಸುವ ಕುರಿತು ಚಿಂತನೆ ನಡೆಸಿದ್ದ ಮಹದೇವು, ಈಗ ಬಿಜೆಪಿ ಜೊತೆ ಕೈ ಜೋಡಿಸಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಸಿದ್ದರಾಮಯ್ಯ ವಿರುದ್ಧವೇ ಸೆಣಸಾಟ ನಡೆಸಬೇಕಾಗುತ್ತದೆ. ಸಿದ್ದು-ಮಹದೇವು ಜಟಾಪಟಿ ಅಲ್ಲಿಯೂ ಮುಂದುವರೆಯಲಿದೆಯೇ ಎಂಬುದು ಈಗ ರಾಜಕೀಯ ವಲಯದಲ್ಲಿ ಮೂಡಿರುವ ಕುತೂಹಲವಾಗಿದೆ.
|