ಹೊಗೇನಕಲ್‌ನ ತಮಿಳುನಾಡು ಯೋಜನೆಯ ವಿರುಧ್ದ ಜಯ ಕರ್ನಾಟಕ ಹಾಗೂ ರಾಜ್ಯ ಕೇಬಲ್ ನಿರ್ವಾಹಕರ ಸಂಘಟನೆ ಇಂದು (ಶುಕ್ರವಾರ) ಹೊಗೇನಕಲ್ ಚಲೋ ಮೂಲಕ ಪ್ರತಿಭಟನೆಗೆ ಇಳಿದಿವೆ.
ಇಂದು ಬೆಂಗಳೂರಿನಿಂದ ಹೊಗೇನಕಲ್‌ವರೆಗೆ ಕಾರ್ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸುತ್ತಿದ್ದು, ಇದರಲ್ಲಿ ಸುಮಾರು 500ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕಾರುಗಳಲ್ಲಿ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ರೂವಾರಿಯಾಗಿರುವ ಮುತ್ತಪ್ಪ ರೈ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಪುರಭವನದಲ್ಲಿ ಕನ್ನಡ ಚಿತ್ರರಂಗದ ಸತ್ಯಾಗ್ರಹ ಮುಂದುವರೆದಿದ್ದು, ಕಲಾವಿದರು ಯೋಜನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕರುಣಾನಿಧಿಯವರ ಅನಾಗರಿಕ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ ನಿರ್ಮಾಪಕ ಹಾಗೂ ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಅವರು, ಕನ್ನಡಕ್ಕಾಗಿ ಸದಾ ಹೋರಾಟ ನಡೆಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಾರ್ವತಮ್ಮ ರಾಜ್‌ಕುಮಾರ್, ಕನ್ನಡದ ನೆಲ, ಜಲ, ರಕ್ಷಣೆಗಾಗಿ ಚಿತ್ರರಂಗವು ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದರು. ಕಲಾವಿದರಿಗೆ ಭಾಷೆಯ ಬೇಲಿ ಬೇಡವೆಂದು ನಟಿ ರಮ್ಯ ತಿಳಿಸಿದರೆ, ಪ್ರತಿಭಟನೆಯ ಹೆಸರಿನಲ್ಲಿ ಹಿಂಸೆ ನಡೆಸುವುದು ಬೇಡವೆಂದು ನಿರ್ದೇಶಕ ಸೂರಿ ಮನವಿ ಮಾಡಿದರು. ಒಟ್ಟಾರೆಯಾಗಿ ಇಡೀ ಚಿತ್ರರಂಗವೇ ಕರ್ನಾಟಕದ ಪರವಾಗಿ ಹೋರಾಟಕ್ಕೆ ಇಳಿದಿವೆ.
|