ರಾಯಚೂರು ಹಾಗೂ ಮಂಡ್ಯದಲ್ಲಿ ನಡೆದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಭೆಗಳಲ್ಲಿ ಕಾರ್ಯಕರ್ತರ ಭಿನ್ನಮತ ಸ್ಫೋಟಗೊಂಡಿದ್ದು, ಹೊಯ್ ಕೈ ನಡೆದಿರುವ ಘಟನೆ ವರದಿಯಾಗಿದೆ.
ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಕರೆಯಲಾಗಿದ್ದ ಜೆಡಿಎಸ್ ಸಭೆಯಲ್ಲಿ ಕಾರ್ಯಕರ್ತರು ಚಪ್ಪಲಿ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಸ್ಫರ್ಧಿಸಲು ಒಮ್ಮತದ ಅಭ್ಯರ್ಥಿಯ ಹೆಸರನ್ನು ಸೂಚಿಸಲು ಕರೆದಿದ್ದ ಸಭೆಯಲ್ಲಿ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯಗಳು ಕಂಡು ಬಂದಾಗ ಜೆಡಿಎಸ್ ಜಿಲ್ಲಾಧ್ಯಕ್ಷ ಶೇಖ್ ರಿಜ್ವಾನ್ ಕಾರ್ಯಕರ್ತರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಕಾರ್ಯಕರ್ತರು ವೇದಿಕೆಯತ್ತಲೇ ಚಪ್ಪಲಿಗಳನ್ನು ಎಸೆದರು.
ಮಂಡ್ಯದಲ್ಲಿ ಕಾಂಗ್ರೆಸ್ ಕೂಡ ಇದಕ್ಕೆ ಹೊರತಾಗಿಲ್ಲ. ಮಂಡ್ಯದಲ್ಲಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಎಸ್.ಎಂ. ಕೃಷ್ಣ ಹಾಗೂ ಅಂಬರೀಷ್ ಅವರ ನಿರ್ಧಾರಕ್ಕೆ ಬದ್ಧವಾಗಿರುವ ನಿರ್ಣಯವನ್ನು ಕೈಗೊಳ್ಳೋಣ ಎಂದು ಮಾಜಿ ಸಚಿವೆ ಮೋಟಮ್ಮ ಹೇಳುತ್ತಿದ್ದಂತೆ, ಗದ್ದಲ ಪ್ರಾರಂಭಗೊಂಡಿದೆ.
ಈ ಹೇಳಿಕೆಯಿಂದ ಕಾಂಗ್ರೆಸ್ ಒಳಗುಂಪುಗಳ ನಡುವೆ ಮಾರಾಮಾ ನಡೆಯಿತು. ಕಾರ್ಯಕರ್ತರು ವೇದಿಕೆ ಏರಿ ಟೇಬಲ್‌ಗಳನ್ನು ತಳ್ಳಾಡಿದರಲ್ಲದೆ, ಕುರ್ಚಿಗಳನ್ನು ಎಸೆದರು. ಜಿಲ್ಲಾಧ್ಯಕ್ಷ ಕೆ.ಬಿ. ಚಂದ್ರಶೇಖರ್ ಅವರನ್ನು ಹಿಗ್ಗಾಮುಗ್ಗ ತಳ್ಳಿದರು. ಅಲ್ಲದೆ, ಮೋಟಮ್ಮ ಮೇಲೂ ಹಲ್ಲೆ ನಡೆಸಿದರು. ಕೆಲವೇ ನಿಮಿಷಗಳಲ್ಲಿ ಸಭೆ ರಣರಂಗವಾಯಿತು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್‌ನೊಳಗಿನ ಭಿನ್ನಮತ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.
|