ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿಗಳಿಗೆ ತರಬೇತಿ ನೀಡಲು ಕೇಂದ್ರ ಚುನಾವಣಾ ಆಯೋಗದ ತ್ರಿಮೂರ್ತಿಗಳ ತಂಡ ಏಪ್ರಿಲ್ 8ರಂದು ರಾಜ್ಯ ಆಗಮಿಸಲಿದ್ದು, ಎರಡು ದಿನಗಳ ಕಾಲ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳ ಅಧಿಕಾರಿಗಳಿಗೆ ತರಬೇತಿ ನೀಡಲಿದ್ದಾರೆ.
ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಬಳಸುವ ಪ್ರಚಾರ ಸಾಮಗ್ರಿಗಳು ಹಾಗೂ ನೀತಿ ನಿಯಮಗಳ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟ ಮಾರ್ಗ ಸೂಚಿಯನ್ನು ಹೊರಡಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಮೇ ತಿಂಗಳ ಚುನಾವಣೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ಎರಡು ದಿನಗಳ ಬೇಟಿಗಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಚುನಾವಣಾ ಆಯುಕ್ತರಾದ ಎನ್. ಗೋಪಾಲಸ್ವಾಮಿ ಹಾಗೂ ಆಯುಕ್ತರಾದ ನವೀನ್ ಚಾವ್ಲಾ ಹಾಗೂ ಎಸ್.ವೈ. ಖುರೇಶಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ಆಯೋಗವು ಮೂರು ಹಂತಗಳ ವಿಧಾನಸಭಾ ಚುನಾವಣೆಯನ್ನು ನ್ಯಾಯ ಸಮ್ಮತ ಹಾಗೂ ಮುಕ್ತವಾಗಿ ನಡೆಸಲು ರಾಜಕೀಯ ಪಕ್ಷಗಳು ಮನವಿ ಮಾಡಿಕೊಂಡಿದೆ.
ಈ ತಂಡದಲ್ಲಿ ಉಪ ಆಯುಕ್ತರಾದ ಆರ್. ಭಟ್ಟಾಚಾರ್ಯ, ಜೈ.ಪಿ. ಪ್ರಕಾಶ್ ಹಾಗೂ ಬಿ. ಬಾಲಕೃಷ್ಣನ್ ಇದ್ದಾರೆ ಎಂದು ತಿಳಿದು ಬಂದಿದೆ.
|