'ವಲಸಿಗ' ಕಾಂಗ್ರೆಸಿಗರು ಮೂಲ ಕಾಂಗ್ರೆಸಿಗರ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಅಸಮಾಧಾನವನ್ನು ಕಾರುತ್ತಲೇ ಬಂದು ಕಾಂಗ್ರೆಸ್‌ಗೆ ರಾಜೀನಾಮೆ ಇತ್ತಿದ್ದ ಬೆಂಕಿ ಮಹದೇವು ಶನಿವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.
ಈ ಸಂಬಂಧ ಇಂದು ರಾಜ್ಯಕ್ಕೆ ಆಗಮಿಸಲಿರುವ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹಿರಿಯ ಮುಖಂಡ ಅರುಣ್ ಜೇಟ್ಲಿ ಸಮ್ಮುಖದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಂದ ಬೇಸತ್ತು ಹೊರಬಂದಿರುವುದಾಗಿ ಮಹದೇವು ತಿಳಿಸಿದ್ದಾರೆ. ಈ ಮೊದಲು ಪಕ್ಷಕ್ಕೆ ಮರಳಿ ಸೇರುವಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಹಲವು ಮುಖಂಡರು ಪ್ರಯತ್ನ ನಡೆಸಿದರೂ, ಅದು ಫಲಕಾರಿಯಾಗಲಿಲ್ಲ. ಈ ಮಧ್ಯೆ ಜೆಡಿಎಸ್ ಕೂಡ ಮಹದೇವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತೆರೆಮರೆ ಕಸರತ್ತು ಪ್ರಾರಂಭಿಸಿತ್ತು. ಆದರೆ ತಮ್ಮ ಬೆಂಬಲಿಗರ ನಿರ್ಧಾರದಂತೆ ಕೊನೆಗೆ ಬಿಜೆಪಿ ದಳದೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸಿದರು.
ಮಹದೇವು ಸೇರ್ಪಡೆಯಿಂದ ಚಾಮರಾಜನಗರ ಹಾಗೂ ಮೈಸೂರು ಭಾಗದಲ್ಲಿ ಹೆಚ್ಚಿನ ಬಲ ಬಂದಿದೆ ಎಂಬುದು ಬಿಜೆಪಿ ಲೆಕ್ಕಚಾರ. ಅಲ್ಲದೆ, ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸರಿಸಾಟಿಯಾಗಿ ನಿಲ್ಲಬಹುದಾದ ಮಹದೇವು, ಬಿಜೆಪಿ ಸೇರಿರುವುದು ಬಿಜೆಪಿಯಲ್ಲಿ ಎಲ್ಲಿಲ್ಲದ ಉತ್ಸಾಹ ಮೂಡಿಸಿದೆ. ಈ ಮೂಲಕ ಮೈಸೂರಿನಲ್ಲೂ ಪಕ್ಷವನ್ನು ಬಲಪಡಿಸುವತ್ತ ಬಿಜೆಪಿ ಕಾರ್ಯೋನ್ಮುಖವಾಗಿದೆ.
ಈ ಮಧ್ಯೆ ರಾಜ್ಯದ ಬಿಜೆಪಿ ಘಟಕದೊಂದಿಗೆ ಚರ್ಚೆ ನಡೆಸಲಿರುವ ಅರುಣ್ ಜೇಟ್ಲಿ ಚುನಾವಣಾ ಕಾರ್ಯತಂತ್ರದ ಕುರಿತು ನಾಯಕರೊಂದಿಗೆ ಸಭೆ ನಡೆಸಲಿದ್ದು, ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪರೀಶೀಲಿಸಲಿದ್ದಾರೆ.
|