ಕನ್ನಡ ನಾಡಲ್ಲಿ ಹುಟ್ಟಿ ಹೊಟ್ಟೆಪಾಡಿಗಾಗಿ ತಮಿಳುನಾಡಿಗೆ ವಲಸೆ ಹೋಗಿರುವ ಚಿತ್ರನಟರಾದ ರಜನೀಕಾಂತ್, ಅರ್ಜುನ್ ಸರ್ಜಾ, ಪ್ರಕಾಶ್ ರೈ ಇವರುಗಳು ಕನ್ನಡಿಗರು ಮತ್ತು ತಮಿಳರ ನಡುವಿನ ಬಾಂಧವ್ಯ ವೃದ್ಧಿ ಮಾಡುವ ಬದಲಿಗೆ ತಮಿಳುನಾಡಿನ ಪರವಾಗಿ ನಡೆದುಕೊಂಡಿರುವುದು ಖಂಡನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ನ ಕೋಶಾಧಿಕಾರಿ ಹಾಗೂ ಹೊಟೇಲು ಸಹಕಾರಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಕಿಡಿಕಾರಿದ್ದಾರೆ.
ಶನಿವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೆಂಗಳೂರು ಹೊಟೇಲುಗಳ ಸಂಘ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಅವರು ಮಾತನಾಡಿದರು. ವಿನಾಕಾರಣ ಕನ್ನಡಿಗರ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಯನ್ನು ನೀಡಿರುವುದೇ ಅಲ್ಲದೇ ಎರಡೂ ರಾಜ್ಯಗಳು ಹೊತ್ತಿ ಉರಿಯುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ನಡವಳಿಕೆಯನ್ನು ಅವರು ಖಂಡಿಸಿದರು.
ಪ್ರತಿಭಟನೆಯಲ್ಲಿ ಹಾಜರಿದ್ದ ಬೆಂಗಳೂರು ಹೊಟೇಲುಗಳ ಸಂಘದ ಕಾರ್ಯದರ್ಶಿ ಪಿ.ಸಿ.ರಾವ್ ಅವರು ಮಾತನಾಡುತ್ತಾ, ದೇಶದೆಲ್ಲೆಡೆ ಹೊಟೇಲುಗಳನ್ನು ಸ್ಥಾಪಿಸಿ ಶುಚಿ-ರುಚಿಯಾದ ಊಟೋಪಹಾರಗಳನ್ನು ಒದಗಿಸುವ ಮೂಲಕ ಗ್ರಾಹಕರ ಸೇವೆಯನ್ನು ಮಾಡುತ್ತಿರುವ ಹೊಟೇಲು ಉದ್ಯಮದವರ ಮೇಲೆ ನಡೆದಿರುವ ಈ ಬಗೆಯ ದಾಳಿಯ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿ, ಇದು ಕೇವಲ ಅವರೊಬ್ಬರ ಮೇಲೆ ನಡೆದಿರುವ ದಾಳಿಯಲ್ಲ, ಸಮಗ್ರ ಕನ್ನಡಿಗರ ಸ್ವಾಭಿಮಾನಕ್ಕೆ ಬಿದ್ದಿರುವ ಪೆಟ್ಟು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹೊಟೇಲು ಉದ್ಯಮಿಗಳಾದ ಪಿ.ಸಿ.ರಾವ್, ನಾಗರಾಜ ಧನ್ಯ, ಮಧುಕರ ಶೆಟ್ಟಿ, ಬೇಳೂರು ರಾಘವೇಂದ್ರ ಶೆಟ್ಟಿ, ರಾಜೀವ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
|