ರಾಜ್ಯದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬರುವತನಕ ಹೊಗೇನಕಲ್ ಯೋಜನೆಯನ್ನು ತಡೆಹಿಡಿಯಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಏಪ್ರಿಲ್ 10ರಂದು ಕರೆದಿರುವ ರಾಜ್ಯ ಬಂದ್ ರದ್ದುಗೊಳಿಸಲು ನಿರ್ಧರಿಸಿದೆ.
ಶನಿವಾರ ಕರುಣಾನಿಧಿ ಹೇಳಿಕೆ ಹೊರಬೀಳುತ್ತಿರುವಂತೆ ತುರ್ತು ಸಭೆ ನಡೆಸಿದ ಕನ್ನಡ ಪರ ಸಂಘಟನೆಗಳು ಈ ನಿರ್ಧಾರಕ್ಕೆ ಬಂದಿವೆ. ಸಭೆಯಲ್ಲಿ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
ಕನ್ನಡ ಪರ ಸಂಘಟನೆಗಳು ಬಂದ್ ರದ್ದುಗೊಳಿಸಿದ್ದರೂ, ಹೋರಾಟ ಮಾತ್ರ ಮುಂದುವರಿಯಲಿದೆ. ತಮಿಳು ಚಿತ್ರ ಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಸಂಘಟನೆ ತಿಳಿಸಿದೆ. ಅಲ್ಲದೆ, ಹೊಗೇನಕಲ್ ಯೋಜನೆಗೆ ತಮಿಳುನಾಡು ಮತ್ತೆ ಚಾಲನೆ ನೀಡಿದರೆ, ಉಗ್ರ ಹೋರಾಟ ನಡೆಸುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿದೆ.
ಈ ಮೂಲಕ ಕಳೆದ ನಾಲ್ಕು ದಿನಗಳಿಂದ ಹೊಗೇನಕಲ್ ಯೋಜನೆಯ ಕುರಿತು ಕರುಣಾನಿಧಿ ನೀಡಿದ್ದ ಹೇಳಿಕೆ ಎರಡು ರಾಜ್ಯಗಳಲ್ಲಿಯೂ ಹಿಂಸಾಚಾರಕ್ಕೆ ತಿರುಗಿದ್ದು, ಕರುಣಾನಿಧಿ ತಾತ್ಕಾಲಿಕ ಸ್ಥಗಿತವನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಕಿಯಾಗಿದ್ದ ಹೊಗೆ ಸ್ವಲ್ಪ ತಣ್ಣಗಾಗಿದೆ.
|