ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಪಡೆದು ಅಧಿಕಾರ ಸ್ಥಾಪಿಸುವುದೇ ಬಿಜೆಪಿಯ ಮುಖ್ಯ ಗುರಿ ಎಂದು ಹೇಳಿರುವ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ, ರಾಜ್ಯದಲ್ಲಿ ಈ ಭಾರಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬಿಜೆಪಿ ಕಾರ್ಯಕರ್ತರ ಚುನಾವಣಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಚುನಾವಣೆಯಲ್ಲಿ ನಿಚ್ಚಳ ಬಹುಮತ ಪಡೆಯುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವೈಫಲ್ಯಗಳು, ಜೆಡಿಎಸ್‌ನ ವಿಶ್ವಾಸ ದ್ರೋಹವನ್ನು ಅಸ್ತ್ರವಾಗಿಸಿಕೊಂಡು ಪಕ್ಷದ ಪರ ದೃಢವಾಗಿ ಕಾರ್ಯ ನಿರ್ವಹಿಸಬೇಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿಯಬೇಕಿತ್ತು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕುಟಿಲತನದಿಂದ ತಪ್ಪಿಹೋಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಯಶಸ್ಸಿನ ಹೆಜ್ಜೆ ಇಡಲಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಯುಪಿಎ ಸರಕಾರದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ಭಯೋತ್ಪಾದಕತೆ, ರೈತ ವಿರೋಧಿ ನೀತಿ, ದೇಶದಲ್ಲಿ ಒಂದು ಸ್ಪಷ್ಟ ಆರ್ಥಿಕ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಜನತೆಗೆ ಮಾಡಿರುವ ವಿಶ್ವಾಸದ್ರೋಹವನ್ನು ತಿಳಿಸುವ ಮೂಲಕ ಕಾರ್ಯಕರ್ತರು ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
|