ಐಐಎಸ್ಸಿ ಮೇಲಿನ ದಾಳಿ ಯಶಸ್ವಿಯಾಗಿದ್ದರೆ ನಗರದಲ್ಲಿ ಮತ್ತೆ ಮೂರು ಕಡೆ ದಾಳಿ ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿತ್ತು ಎಂಬುದು ಉಗ್ರ ಸಬಾವುದ್ದೀನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ತಿಳಿದು ಬಂದ ಮಾಹಿತಿ.
ಭಾರತೀಯ ವಿಜ್ಞಾನ ಮಂದಿರದ ಮೇಲೆ ನಡೆದ ದಾಳಿಯಲ್ಲಿ ಆರು ಮಂದಿ ಉಗ್ರರು ಸಹಕರಿಸಿದ್ದು, ಉಳಿದವರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. ಆದರೆ ಆ ಮೂರು ಸ್ಥಳಗಳು ಹಾಗೂ ವ್ಯಕ್ತಿಗಳ ಕುರಿತ ಮಾಹಿತಿಯನ್ನು ಪೊಲೀಸರು ತನಿಖೆಯ ದೃಷ್ಟಿಯಿಂದ ಬಹಿರಂಗಪಡಿಸಿಲ್ಲ.
ಹೊನ್ನಾಳಿ ಪೊಲೀಸರು ಬಂಧಿಸಿದ್ದ ನಾಸಿರ್ ಎನ್ನುವಾತನನ್ನು ವಿಚಾರಣೆಗೆ ಒಳಪಡಿಸಿದಾಗ ಸಬಾವುದ್ದೀನ್ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿತು. ಸಬಾವುದ್ದೀನ್‌ನನ್ನು ಹೆಬ್ಬಾಳದ ಕೆಂಪಾಪುರದಲ್ಲಿ ಈ ಹಿಂದೆ ವಾಸವಿದ್ದ ಆತನ ಮನೆಗೆ ಕರೆದೊಯ್ದು ಐಐಎಸ್ಸಿಯ ನಕ್ಷೆ, ಲಷ್ಕರ್ ಇ ತೊಯ್ಬಾದ ರಹಸ್ಯ ಸಂಕೇತಗಳ ಪಟ್ಟಿ ಸೇರಿದಂತೆ ಹಲವು ಮಹತ್ವದ ದಾಖಲೆಗಳು ಪೊಲೀಸರು ಪಡೆದುಕೊಂಡಿದ್ದಾರೆ.
ಬಂಧಿಸಲಾಗಿರುವ ಉಗ್ರರಿಗೆ ಪಾಕಿಸ್ತಾನ ಐಎಸ್ಐನಿಂದ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದ್ದು, ಅದನ್ನು ಅಬ್ದುಲ್ ಅಜೀಜ್ಎಂಬ ಉಗ್ರನ ನಿರ್ದೇಶನ ಮೇರೆಗೆ ಕಾಶ್ಮೀರದಿಂದ ಟಾಟಾಸುಮೋದಲ್ಲಿ ಬೆಂಗಳೂರಿಗೆ ಕರೆತರಲಾಗಿತ್ತು ಎಂದು ಸಬಾವುದ್ದೀನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಲಷ್ಕರ್ ಇ ತೊಯ್ಬಾ ಸೂಚನೆ ಮೇರೆಗೆ ಭಾರತಕ್ಕೆ ಬಂದಿರುವುದಾಗಿ ತಿಳಿಸಿರುವ ಈತ, 2005ರಲ್ಲಿ ಹೆಬ್ಬಾಳ ಹತ್ತಿರ ಕಾಲೇಜಿನಲ್ಲಿ ಪ್ರವೇಶ ಪಡೆದು, ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದ ಎಂಬ ಮಾಹಿತಿ ನೀಡಿದ್ದಾನೆ.
ಈ ಮಧ್ಯೆ ಐಐಎಸ್ಸಿ ದಾಳಿಯಲ್ಲಿ ಇನ್ನೊಬ್ಬ ಉಗ್ರನಾದ ಅಬು ಅಮ್ಜಾನ್‌ನನ್ನು ಕೂಡ ಸಬಾವುದ್ದೀನ್ ಸುಳ್ಳು ಹೆಸರು ಕೊಟ್ಟು ವಿಮಾನದ ಮೂಲಕ ಭಾರತಕ್ಕೆ ಕರೆದುಕೊಂಡು ಬಂದಿದ್ದ ಎಂದು ತಿಳಿದು ಬಂದಿದೆ.
|