ಸಾಲ ಮನ್ನಾ ಯೋಜನೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಯೋಜನೆಯ ಘೋಷಣೆ ಸಂದರ್ಭದಲ್ಲಿ ತಮ್ಮನ್ನು ಆಹ್ವಾನಿಸಿದ ದೇವೇಗೌಡರು, ಈ ಯೋಜನೆಯನ್ನು ಕೈಬಿಡುವಂತೆ ಸೂಚನೆ ನೀಡಿದ್ದರಲ್ಲದೆ, ಯೋಜನೆ ಕೈಗೊಂಡರೆ ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್ ಒಪ್ಪಿಗೆ ನೀಡುವುದಿಲ್ಲ ಎಂದು ಎಚ್ಚರಿಸಿದ್ದರು ಎಂದು ತಿಳಿಸಿದರು.
ಆದರೆ, ರಾಜ್ಯದ ತೆರಿಗೆ ಆದಾಯ ಉತ್ತಮವಾಗಿದ್ದರಿಂದ ಹಾಗೂ ರಾಜ್ಯದ ಆರ್ಥಿಕ ವ್ಯವಸ್ಥೆ ಸದೃಢವಾಗಿತ್ತು. ಅಲ್ಲದೆ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಗೌಡರ ವಿರೋಧದ ನಡುವೆಯೂ ಸಾಲಮನ್ನಾ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳಿಂದ ರಾಜ್ಯದ ಏಳಿಗೆ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯನ್ನು ತೀಕ್ಷ್ಮವಾಗಿ ಖಂಡಿಸಿದ ಯಡಿಯೂರಪ್ಪ, ಪ್ರಾದೇಶಿಕ ಪಕ್ಷಗಳಿಂದ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಅಧಿಕ. ಕೇವಲ ರಾಷ್ಟ್ರೀಯ ಪಕ್ಷಗಳು ಮಾತ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಲ್ಲವು. ಆದ್ದರಿಂದ ಪ್ರಾದೇಶಿಕ ಪಕ್ಷಗಳನ್ನು ತಿರಸ್ಕರಿಸಬೇಕೆಂದು ಜನತೆಗೆ ಕರೆ ನೀಡಿದರು.
|