"ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಭೂಗಳ್ಳರ ಹಾಗೂ ಗೂಂಡಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಬಿಜೆಪಿ ಅಂತಹ ಯಾವುದೇ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಹೇಳಿದ್ದಾರೆ.
ಭೂಗಳ್ಳರಿಗೆ, ರಾಜಕೀಯ ಗೂಂಡಾಗಳಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿ ಇಂದು ರಾಷ್ಟ್ರಮಟ್ಟದ ಪಕ್ಷವಾಗಿ ಬೆಳೆದಿದೆ. ದೇಶದ ಹಿತಕಾಯುವ ಜವಾಬ್ದಾರಿಯನ್ನು ಕೂಡಾ ಈ ಪಕ್ಷ ಹೊಂದಿದೆ. ರಾಜ್ಯದಲ್ಲಿ ಸ್ಥಿರ ಹಾಗೂ ಅಭಿವೃದ್ಧಿಪರ ಸರಕಾರ ನೀಡುವ ಸಾಮರ್ಥ್ಯವಿರುವುದು ಬಿಜೆಪಿಗೆ ಮಾತ್ರ. ಆದ್ದರಿಂದ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕೆಂದು ಅವರು ಜನತೆಯಲ್ಲಿ ಮನವಿ ಮಾಡಿದರು.
ಪಕ್ಷದ ಆದರ್ಶ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಪ್ರಾಮಾಣಿಕ ಕಾಳಜಿ ತೋರಬೇಕಿದೆ. ಅಲ್ಲದೆ, ಪಕ್ಷದ ಸಂಘಟನೆ ಹಾಗೂ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು.
|