ರಾಜ್ಯ ವಿಧಾನಸಭಾ ಚುನಾವಣೆಗೆ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ಬಿಜೆಪಿ ನಿರ್ಧರಿಸಿದ್ದು, ಯಾವುದೇ ಪಕ್ಷದ ಜೊತೆಗೆ ಮೈತ್ರಿ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಮಧ್ಯೆ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುನೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಇಂಗಿತ ವ್ಯಕ್ತಪಡಿಸಿದೆ. ಆದರೆ ರಾಜ್ಯ ಬಿಜೆಪಿ ಘಟಕ ಆಸಕ್ತಿ ವಹಿಸುತ್ತಿಲ್ಲ. ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿರುವುದರಿಂದ ಇತರ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಈಗಾಗಲೇ ಜೆಡಿಯು ಹಾಗೂ ಬಿಜೆಪಿ ದೆಹಲಿಯಲ್ಲಿ ಇತ್ತೀಚೆಗೆ ಸಭೆ ನಡೆಸಿ ರಾಷ್ಟ್ರೀಯ ಮಟ್ಟದಲ್ಲಿ ಚುನಾವಣೆ ಹೊಂದಾಣಿಕೆ ಕುರಿತು ಚರ್ಚೆ ನಡೆಸಿದ್ದು, ಎರಡು ಪಕ್ಷಗಳು ಒಪ್ಪಿಗೆ ಸೂಚಿಸಿದ್ದವು. ಹಾಗೆಯೇ, ಈ ಹಿಂದೆ ಎಐಎಡಿಎಂಕೆ ಪಕ್ಷ ಕೂಡ ಬಿಜೆಪಿ ಜೊತೆ ರಾಜ್ಯ ವಿಧಾನಸಭಾ ಕ್ಷೇತ್ರದ ಮೂಲಕ ಚುನಾವಣಾ ಮೈತ್ರಿಗೆ ಮುಂದಾಗಿದ್ದರೂ, ರಾಜ್ಯ ಬಿಜೆಪಿ ಸ್ವಂತ ಕಾಲ ಮೇಲೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ.
|