ವಿಧಾನಸಭಾ ಚುನಾವಣೆಗಾಗಿ ಸುಮಾರು 150 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮವಾಗಿದ್ದು, ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಎಪ್ರಿಲ್ 10ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಪಕ್ಷದ ಸಭೆಯಲ್ಲಿ ಸಿದ್ದಪಡಿಸಲಾಗಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ ಸುಮಾರು 10 ಮಾಜಿ ಶಾಸಕರಿಗೆ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ. ಕ್ಷೇತ್ರಗಳ ಕಾರ್ಯಕರ್ತರ ಮನವಿ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕಳೆದ ಬಾರಿ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಬಹುಮತದಿಂದ ಗೆದ್ದಿದ್ದ ಶಕುಂತಳಾ ಶೆಟ್ಟಿ ಅವರಿಗೂ ಬಾರಿ ಪಕ್ಷದಿಂದ ಟಿಕೆಟ್ ನೀಡುವ ಲಕ್ಷಣಗಳು ತೀರಾ ಕಡಿಮೆ. ಇವರ ಸ್ಥಾನಕ್ಕೆ ಮಲ್ಲಿಕಾ ಪ್ರಸಾದ್ ಅವರನ್ನು ಕಣಕ್ಕಿಳಿಸಲು ಪಕ್ಷದೊಳಗೆ ಕಸರತ್ತು ನಡೆಯುತ್ತಿದೆ. ಶಕುಂತಳಾ ಶೆಟ್ಟಿ ಹಾಗೂ ರಾಜ್ಯಾಧ್ಯಕ್ಷ ಸದಾನಂದ ಗೌಡ ಅವರ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಆಗಿದ್ದು, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕೂಡಾ ಶಕುಂತಳಾ ಶೆಟ್ಟಿಗೆ ಟಿಕೆಟ್ ನೀಡುವುದಕ್ಕೆ ವಿರುದ್ಧ ಅಭಿಪ್ರಾಯ ಹೊಂದಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಶಕುಂತಳಾ ಶೆಟ್ಟಿಗೆ ಪಕ್ಷದಿಂದ ಟಿಕೆಟ್ ನೀಡದಿದ್ದಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಲಕ್ಷಣಗಳು ಕೂಡಾ ಕಂಡು ಬರುತ್ತಿದೆ. ಕಳೆದ ಬಾರಿ ವಿಟ್ಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪದ್ಮನಾಭ ಕೊಟ್ಟಾರಿ ಈ ಬಾರಿ ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
|