ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೂರ್ವಭಾವಿಯಾಗಿ ಕಟ್ಟುನಿಟ್ಟಿನ ನೀತಿ ಸಂಹಿತೆಯನ್ನು ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ತಮ್ಮ ವ್ಯಾಪ್ತಿಯ ಪ್ರದೇಶದ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದವರು ಚುನಾವಣೆ ಮುಗಿದ ನಂತರ ಅಂದರೆ ಮೇ 28ರ ಬಳಿಕ ಆಯಾ ಪೊಲೀಸ್ ಠಾಣೆಯಿಂದ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಬಯಸದಿರುವವರು ಜಿಲ್ಲಾ ದಂಡಾಧಿಕಾರಿ ಅಥವಾ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿಯವರ ಬಳಿ ಏ. 11ರ ಒಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಅಲ್ಲದೆ, ರಕ್ಷಣಾ ಕಾರಣಕ್ಕಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ಶಸ್ತ್ರಾಸ್ತ್ರಗಳ ಪರವಾನಗಿ ಹೊಂದಿರುವ ರಕ್ಷಣಾದಳ ಮೊದಲಾದವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿನ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ, ನಿಗಮ ಮಂಡಳಿಗಳು ಸೇರಿದಂತೆ ಇತರ ಸಂಸ್ಥೆಗಳಲ್ಲಿರುವ ಚುನಾಯಿತ ಪ್ರತಿನಿಧಿಗಳಿಗೆ ಒದಗಿಸಲಾಗಿರುವ ವಾಹನಗಳನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಎ. ಸಾದಿಕ್ ಆದೇಶಿಸಿದ್ದಾರೆ.
|