ದೇವಾಲಯವೊಂದರಲ್ಲಿ ಕಳ್ಳತನ ನಡೆದ ಸುದ್ದಿಯಿಂದ ರೊಚ್ಚಿಗೆದ್ದ ನಾಗರಿಕರು ದಾಂಧಲೆ ನಡೆಸಿದ ಪರಿಣಾಮ ಜೇವರ್ಗಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ವರದಿಯಾಗಿದೆ.
ಜೇವರ್ಗಿಯ ಮಹಾಲಕ್ಷ್ಮಿ ದೇವಾಲಯದಿಂದ ಸುಮಾರು 30ಕೆಜಿ ಬೆಳ್ಳಿ, 4 ತೊಲ ಚಿನ್ನ ಸೇರಿದಂತೆ ಇತರ ವಸ್ತುಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ ಎಂಬ ಸುದ್ದಿಯಿಂದ ರೊಚ್ಚಿಗೆದ್ದ ನಾಗರಿಕರು ಕಲ್ಲು ತೂರಾಟ ನಡೆಸಿದ ಪರಿಣಾಮ ಅಘೋಷಿತ ಬಂದ್ ವಾತಾವರಣ ಏರ್ಪಟ್ಟಿದೆ ಎಂದು ತಿಳಿದುಬಂದಿದೆ.
ಉದ್ರಿಕ್ತ ಗುಂಪು ರಸ್ತೆಯಲ್ಲಿ ಟೈರ್ ಹೊತ್ತಿಸಿದ್ದಲ್ಲದೇ ಅಂಗಡಿ ಮುಂಗಟ್ಟು ಸೇರಿದಂತೆ ಇತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದ ಪರಿಣಾಮ ಒಂದು ಪೊಲೀಸ್ ಜೀಪ್ ಸೇರಿದಂತೆ ನಾಲ್ಕು ವಾಹನಗಳು ಹಾನಿಗೊಳಗಾಗಿವೆ. ಇದರಿಂದ ನಗರದಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ ಎಂದು ತಿಳಿದುಬಂದಿದೆ.
ಉದ್ರಿಕ್ತ ಗುಂಪನ್ನು ಚದುರಿಸಿ, ಘಟನೆಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಆಶ್ರುವಾಯು ಸಿಡಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿವೆ. ಘಟನೆಯ ಸಂಬಂಧ ಪೊಲೀಸರು ಇಲ್ಲಿನ ಕರುಣೇಶ್ವರ ಮಠದ ಸ್ವಾಮಿಗಳು ಸೇರಿದಂತೆ ಇತರರನ್ನು ಬಂಧಿಸಲಾಗಿದ್ದು ಈಗ ನಿಷೇಧಾಜ್ಞೆಯನ್ನು ಹೇರಲಾಗಿದೆ ಎಂದು ತಿಳಿದುಬಂದಿದೆ.
|