ಭಾರತೀಯ ವಿಜ್ಞಾನ ಸಂಸ್ಥೆಯ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿರುವ ಉಗ್ರ ಸಭಾವುದ್ದೀನ್‌ನನ್ನು ಮಂಗಳವಾರ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು.
ಈ ದಾಳಿಯಲ್ಲಿ ಇವನೊಂದಿಗೆ ಸಹಕರಿಸಿದ ಪಾಕಿಸ್ತಾನದ ಭಯೋತ್ಪಾದಕ ಅಬುಹಮ್ಮಾನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಭಯೋತ್ಪಾದಕ ನಿಗ್ರಹ ದಳದವರು ಈ ಕ್ರಮ ಕೈಗೊಂಡಿದ್ದು ಸಾಕಷ್ಟು ಪ್ರಮುಖ ಮಾಹಿತಿಗಳು ದೊರಕಿವೆ ಎನ್ನಲಾಗಿದೆ.
ಈ ಸಮಯದಲ್ಲಿ ಉಗ್ರರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಸಿಕ್ಕಿದ್ದು, ಮಂಪರು ಪರೀಕ್ಷೆಯ ವೇಳೆಯಲ್ಲಿ ಸಭಾವುದ್ದೀನ್ ಪೊಲೀಸರೊಂದಿಗೆ ಚೆನ್ನಾಗಿ ಸಹಕರಿಸಿದ್ದಾನೆಂದು ತಿಳಿದುಬಂದಿದೆ.
ನಾಳಿದ್ದು 10 ರಂದು ಈತನನ್ನು ಉತ್ತರ ಪ್ರದೇಶದ ಲಕ್ನೋಗೆ ಕರೆದೊಯ್ದು ಅಲ್ಲಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಈಗಾಗಲೇ ಸಾಕಷ್ಟು ಮಾಹಿತಿಗಳು ಸಿಕ್ಕಿರುವುದರಿಂದ ಮತ್ತೆ ಅವನನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|