ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿ ಚಲನಚಿತ್ರ ಕಲಾವಿದರನ್ನು ವಿನಾಕಾರಣ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಚಿತ್ರರಂಗದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡಿಗರನ್ನುದ್ದೇಶಿಸಿ ಸೂಪರ್‌ಸ್ಟಾರ್ ರಜನೀಕಾಂತ್ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ಚಿತ್ರಗಳನ್ನು ಇನ್ನು ಮುಂದೆ ಬಹಿಷ್ಕರಿಸಲಾಗುವುದು ಎಂದು ಕೆಲವೊಂದು ಕನ್ನಡ ಪರ ಸಂಘಟನೆಗಳು ಹೇಳಿರುವುದರಿಂದ ಈ ಮಾತುಗಳಿಗೆ ಈಗ ರೆಕ್ಕೆಪುಕ್ಕ ಬಂದಿವೆ.
ಚುನಾವಣೆ ಮುಗಿಯುವವರೆಗೆ ಈ ಪರಿಸ್ಥಿತಿ ಇರಬಹುದೇನೋ. ಆದರೆ ಮತ್ತೆ ಎಂದಿನ ವಾತಾವರಣವೇ ನಿರ್ಮಾಣವಾಗಲಿದೆ ಎನ್ನುತ್ತಾರೆ ಚಿತ್ರೋದ್ಯಮಿಯೊಬ್ಬರು. ಭಾವಾವೇಷದ ಮಾತುಗಳನ್ನಾಡುವಾಗ ಒಮೊಮ್ಮೆ ಈ ರೀತಿಯ ಪ್ರತಿಜ್ಞೆಗಳು, ನಿರ್ಣಯಗಳು ಹೊರಹೊಮ್ಮುತ್ತವೆ. ಆದರೆ ಕಾಲಕ್ರಮೇಣ ಎಲ್ಲವೂ ಸರಿಹೋಗುತ್ತದೆ ಎಂಬುದು ಇವರ ಅಭಿಪ್ರಾಯ.
ಆದರೆ ಈ ಮಾತನ್ನು ಮತ್ತೊಬ್ಬ ಚಿತ್ರೋದ್ಯಮಿ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. "ರಜನೀಕಾಂತ್ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂಬುದಕ್ಕಿಂತ ಈ ಕುರಿತು ಅವರು ವಾಹಿನಿಯೊಂದಕ್ಕೆ ನೀಡಿರುವ ಸಮರ್ಥನೆ ಕೆಲವರಲ್ಲಿ ಬೇಸರ ತರಿಸಿದೆ. ತಮ್ಮ ಚಿತ್ರಗಳಿಗೆ ಬಹಿಷ್ಕಾರ ಹಾಕಿದರೆ ತಮಗೇನೂ ನಷ್ಟವಿಲ್ಲ, ನಷ್ಟವಾಗುವುದು ಆ ಚಿತ್ರಗಳನ್ನೂ ನೋಡುವ ಕನ್ನಡಿಗರಿಗೆ ಎಂದು ಅವರು ಹೇಳಿರುವುದು ಮತ್ತು ತಾವು ಕ್ಷಮೆ ಕೋರುವ ಮಾತೇ ಇಲ್ಲ; ವಿಷ್ಣು, ಅಂಬರೀಷ್, ಪಾರ್ವತಮ್ಮ ರಾಜ್‌ಕುಮಾರ್ ಮೊದಲಾದ ಗಣ್ಯರು ಹೇಳಿದರೆ ಮಾತ್ರ ಕ್ಷಮೆ ಕೋರುವುದಾಗಿ ಹೇಳಿರುವುದು ಕೆಲವರಲ್ಲಿ ಬೇಸರ ತರಿಸಿದೆ. ರಜನಿ ವಿನಾಕಾರಣ ಇವರನ್ನೆಲ್ಲಾ ಸಮರ್ಥನೆಗೆ ಎಳೆದಿದ್ದಾರೆ. ಇದರಿಂದಾಗಿ ರಜನಿಯ ಕ್ರೇಜ್ ಕೊಂಚ ಕಮ್ಮಿಯಾಗಬಹುದು" ಎಂದು ಅಭಿಪ್ರಾಯಿಸಿದ್ದಾರೆ
|