ಪತಿಯನ್ನೇ ಅಮಾನತಿನಲ್ಲಿಡುವಂತೆ ಐಎಎಸ್ ಅಧಿಕಾರಿಯೊಬ್ಬರ ಪತ್ನಿಯು ರಾಜ್ಯಪಾಲರಿಗೆ ಮೊರೆ ಹೋಗಿದ್ದಾರೆ! ಇದೇನು ವಿಚಿತ್ರ ಅಂತ ತಿಳಿದುಕೊಂಡಿರಾ? ಹೌದು. ಇಂಥದ್ದೊಂದು ಪ್ರಕರಣ ಕರ್ನಾಟಕದಿಂದಲೇ ವರದಿಯಾಗಿದೆ.
ಹಿರಿಯ ಐಎಎಸ್ ಅಧಿಕಾರಿ, ಬೆಳಗಾವಿ ಕಾಡಾ ವ್ಯವಸ್ಥಾಪಕ ನಿರ್ದೇಶಕ ಎಂ.ಎನ್. ವಿಜಯ್ ಕುಮಾರ್ ಅವರನ್ನು ಅಮಾನತಿನಲ್ಲಿಡುವಂತೆ ಅವರ ಪತ್ನಿ ಜೆ.ಎನ್. ಜಯಶ್ರೀ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣವೇನು ಗೊತ್ತೇ?
ತಮ್ಮ ಪತಿಗೆ ಸತತವಾಗಿ ಆಗುತ್ತಿರುವ ಅನ್ಯಾಯ, ಹಿರಿಯ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಹಾಗೂ ಅವರಿಗೆ ಬರುತ್ತಿರುವ ಜೀವ ಬೆದರಿಕೆಯ ಕರೆಗಳಿಂದ ಬೇಸತ್ತ ಜಯಶ್ರೀ ಈ ಮನವಿಗೆ ಮುಂದಾಗಿದ್ದಾರೆ.
ತಮ್ಮ ಪತಿ ನಿಷ್ಠಾವಂತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದರೆ, ಕಳೆದ ಎರಡು ವರ್ಷದಿಂದ ಅವರಿಗೆ ಪದೇ ಪದೇ ಜೀವ ಬೆದರಿಕೆ ಕರೆಗಳು ಬಂದಿವೆ. ಪೊಲೀಸ್ ರಕ್ಷಣೆ ಇರುವಾಗಲೇ ಬೆಳಗಾವಿಯಲ್ಲಿ ಎರಡು ಬಾರಿ ಕೊಲೆ ಪ್ರಯತ್ನ ನಡೆದಿದೆ ಎಂದಿರುವ ಜಯಶ್ರೀ, ಈ ಕುರಿತಂತೆ ರಾಷ್ಟ್ರಪತಿಗಳಿಗೆ ದೂರು ನೀಡಿ ಪ್ರಕರಣದ ತನಿಖೆ ನಡೆಸುವಂತೆ ಕೋರಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ ಫಲವಾಗಿ ತಮ್ಮ ಪತಿಯನ್ನು 2006 ಸೆಪ್ಟೆಂಬರ್‌ನಿಂದ 2007 ಜೂನ್ 7 ರವರೆಗೆ 7 ಬಾರಿ ವರ್ಗಾವಣೆ ಮಾಡಲಾಯಿತು. ಹೀಗೆ ಪ್ರತಿ ಬಾರಿಯೂ ತಮ್ಮ ಪತಿಗೆ ಅನ್ಯಾಯವಾಗುತ್ತಿರುವುದರಿಂದ ಅವರನ್ನು ಅಮಾನತಿನಲ್ಲಿಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಜಯಶ್ರೀ ನುಡಿದಿದ್ದಾರೆ.
|