ಬುಧವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ತನ್ನ ಅಧಿಕಾರಕ್ಕೆ ಪಕ್ಷ ಬಂದರೆ ಯಾವೆಲ್ಲಾ ಪ್ರಮುಖಾಂಶಗಳನ್ನು ಕೈಗೊಳ್ಳಲಿದೆ ಎಂಬುದನ್ನು ಪಟ್ಟಿಮಾಡಿದ್ದು, ಎಐಸಿಸಿ ಅನುಮೋದನೆಗಾಗಿ ದೆಹಲಿಗೆ ರವಾನಿಸಿದೆ.
ಇಂದು ನಗರದಲ್ಲಿ ಚುನಾವಣಾ ಪ್ರಣಾಳಿಕೆ ಸಭೆಯಲ್ಲಿ ಸಿದ್ಧಗೊಂಡಿರುವ ಪ್ರಣಾಳಿಕೆಯಲ್ಲಿ ಇಂದಿರಾ ಅವಾಸ್ ಯೋಜನೆ ಅಡಿಯಲ್ಲಿ ರೈತರ ಸಾಲಮನ್ನಾ ವಿಷಯವೇ ಪ್ರಮುಖವಾಗಿದೆ. ಅಲ್ಲದೆ, ಪ್ರತಿ ಹಸಿರು ಕಾರ್ಡ್ ಹೊಂದಿದವರಿಗೆ 2ರೂ. ಅಕ್ಕಿ, ಕುಟುಂಬಕ್ಕೆ ಕಲರ್ ಟಿವಿ ಹಾಗೂ ಹಸಿರು ಕಾರ್ಡ್‌ದಾರರಿಗೆ ಯಶಸ್ವಿನಿ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಇನ್ನು ನಿರುದ್ಯೋಗಿಗಳಿಗೆ ಎರಡು ವರ್ಷ ತರಬೇತಿ ಹಾಗೂ ಮಾಸಿಕ ಭತ್ಯೆಯನ್ನು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸೇರಿಸಿಕೊಂಡಿದೆ. ಅಲ್ಲದೆ, ವಿವಿಧ ವರ್ಗದವರಿಗೆ ಶೇ.3ರ ಬಡ್ಡಿದರದಲ್ಲಿ ಸಾಲ ನೀಡುವುದು ಹಾಗೂ ವಸತಿಹೀನರಿಗೆ 15 ಲಕ್ಷ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಈ ಮಧ್ಯೆ ಹಲವು ಗೊಂದಲಗಳ ನಡುವೆಯೇ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ತಯಾರಿಸಲು ಮುಂದಾಗಿದೆ. ಪಕ್ಷದಲ್ಲಿ ಮಹಿಳೆಯರಿಗೆ ಹಾಗೂ ಯುವಕರಿಗೆ ಆದ್ಯತೆ ನೀಡಬೇಕೆಂಬುದು ಒಂದು ಕಡೆಯಾದರೆ, ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ನಡುವಿನ ಭಿನ್ನಾಭಿಪ್ರಾಯ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ನಾಳೆಯೊಳಗಾಗಿ ಕಾಂಗ್ರೆಸ್ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
|