ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದರ ಬಗ್ಗೆ ಚಿಂತಿಸದೆಪಕ್ಷಕ್ಕೆ ಸ್ಪಷ್ಟ ಬಹುಮತ ತಂದು ಕೊಡುವ ಕನಸು ಕಂಡು ಅದಕ್ಕಾಗಿ ಶಿಸ್ತಿನಿಂದ ದುಡಿಯಿರಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇದೇ ತಿಂಗಳ 15 ರಂದು ಮಂಡ್ಯದಲ್ಲಿ ಪಕ್ಷ ಏರ್ಪಡಿಸಿರುವ 'ಮಹಿಳಾ ಸಮಾವೇಶ'ದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಬೆಂಗಳೂರು ಅರಮನೆ ಮೈದಾನದಲ್ಲಿ ಕರೆದಿದ್ದ ಜಿಲ್ಲಾ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
"ತಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಮರೆತು ಪಕ್ಷದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿ. ಕಾಂಗ್ರೆಸ್ ಕಾರ್ಯಕರ್ತರಿಗೆ ಒಳ್ಳೆಯ ದಿನಗಳು ಬರುತ್ತಿವೆ" ಎಂದ ಅವರು, ಮಂಡ್ಯದ ಮಹಿಳಾ ಸಮಾವೇಶಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಆಗದಂತೆ ಸುರಕ್ಷಿತವಾಗಿ ತಾಯಂದಿರನ್ನು ಕಳುಹಿಸಿ ಕೊಟ್ಟು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಐಟಿ ಬಿಟಿಯ ಕುರಿತು ಮಾತನಾಡಿದ ಅವರು, ಈಗ ಐಟಿ-ಬಿಟಿ ಕೆಲಸ ಮುಗಿದು ಹೋಗಿದೆ. ಹೈದರಾಬಾದ್‌ಗೆ ಸ್ಥಳಾಂತರ ಆಗುತ್ತಿದ್ದ ಕಂಪೆನಿಗಳನ್ನು ಆ ಸಮಯದಲ್ಲಿ ತಡೆಯುವ ಪ್ರಯತ್ನದ ಪರಿಣಾಮ ಇಂದು ಬೆಂಗಳೂರು ವಿಶ್ವದ ಗಮನ ಸೆಳೆಯುತ್ತಿದೆ. ತೆರಿಗೆ ಮತ್ತಿತರ ರೂಪದಲ್ಲಿ 1998-99ರಲ್ಲಿ ವಾರ್ಷಿಕ 3 ಸಾವಿರ ಕೋಟಿ ರೂ. ಆದಾಯವಿದ್ದರೆ ಈಗ 31 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ ಎಂದರು.
ಪ್ರಸ್ತುತ ಚುನಾಣೆಯನ್ನು ಇಡೀ ದೇಶವೇ ನೋಡುತ್ತಿದ್ದು, ಶಿಸ್ತಿನಿಂದ ಕೆಲಸ ಮಾಡಿ ಕಾಂಗ್ರೆಸನ್ನು ಅಧಿಕಾರಕ್ಕೆ ತನ್ನಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
|