ಜನಪರ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಮತ್ತು ಕಾಳಜಿ ಹೊಂದಿರುವ ಸಂಘಟನೆಗಳು ಒಟ್ಟುಗೂಡಿ ಮುಂದಿನ ಚುನಾವಣೆಯಲ್ಲಿ 'ಜನಪರ ರಾಜಕೀಯ ರಂಗ- ಕರ್ನಾಟಕಳ' ಎಂಬ ಹೆಸರಿನಡಿಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ.
ಕೋಮುವಾದಿ, ಗೂಂಡಾಗಿರಿ, ಗಣಿ ಮತ್ತು ಭೂ ಮಾಫಿಯಾಕ್ಕೆ ಸೇರಿದ ವಿರೋಧಿ ಶಕ್ತಿಗಳಿಗೆ ಸರಿಸಾಟಿಯಾಗಿ ಸಡ್ಡುಹೊಡೆಯಲು ಸರ್ವೋದಯ ಕರ್ನಾಟಕ ಪಕ್ಷ, ಭಾರತ ಕಮ್ಯೂನಿಸ್ಟ್ ಪಕ್ಷ, ಭಾರತೀಯ ರಿಪಬ್ಲಿಕನ್ ಪಕ್ಷ ಮತ್ತು ಭಾರತ ಫಾರ್ವಡ್ ಬ್ಲಾಕ್ ಪಕ್ಷಗಳು ಒಟ್ಟುಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
ಕರ್ನಾಟಕದಲ್ಲಿ ಪ್ರಜಾಸತ್ತೆ ಅಪಾಯಕರ ಸ್ಥಿತಿಯಲ್ಲಿದ್ದು, ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಕೆಳಸ್ತರದ ಮತ್ತು ಸಾಮಾನ್ಯ ಜನತೆಯ ಆಶೋತ್ತರಗಳನ್ನು ಬಿಂಬಿಸುವ ವ್ಯಕ್ತಿಗಳನ್ನು ವಿಧಾನಸಭೆಗೆ ಕಳುಹಿಸುವುದು ನೂತನ ಪಕ್ಷದ ಆಶಯವಾಗಿದೆ ಎಂದು ಪಕ್ಷದ ಪರವಾಗಿ ಡಾ. ಸಿದ್ದನಗೌಡ ಪಾಟೀಲ್ ತಿಳಿಸಿದ್ದಾರೆ.
"ಜಾತ್ಯತೀತ ಮತಗಳು ಚದುರಿ ಹೋಗುವುದನ್ನು ತಪ್ಪಿಸಲು ಹಾಗೂ ರೈತರ ಹಾಗೂ ದುಡಿಯುವ ವರ್ಗವನ್ನು ಪ್ರತಿನಿಧಿಸುವಂತಹ ಪ್ರಾಮಾಣಿಕ ವ್ಯಕ್ತಿಗಳ ಅವಶ್ಯಕತೆ ಇದೆ. ಈ ದಿಸೆಯಲ್ಲಿ ಜನಪರ ಸಂಘಟನೆಗಳು ಒಂದಾಗಿ ಚುನಾವಣಾ ತಂತ್ರವನ್ನು ರೂಪಿಸುವುದು ಅನಿವಾರ್ಯವಾಗಿದೆ" ಎಂದು ಅವರು ತಿಳಿಸಿದರು.
|