ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ಸಮೀಕ್ಷೆ: ನ್ಯೂಸ್ರೂಮ್

ಬಿಜೆಪಿ ತನ್ನ 136 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಇತರ ರಾಜಕೀಯ ಪಕ್ಷಗಳನ್ನು ಹಿಂದಿಕ್ಕಿದೆ.

ಈ ಪಟ್ಟಿಯಲ್ಲಿ ಹಾಲಿ ಬಳ್ಳಾರಿ ಸಂಸದ ಕರುಣಾಕರ ರೆಡ್ಡಿ ಮತ್ತು ಬಿಜಾಪುರ ಸಂಸದ ಬಸನಗೌಡ ಪಾಟೀಲ ಯತ್ನಾಳ, ನೈಸ್ ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿ ಸಹೋದರನ ಪುತ್ರ ಸಂಜಯ್ ಖೇಣಿ ಸೇರಿದಂತೆ ಹಲವು ಅಚ್ಚರಿಯ ಹೆಸರುಗಳು ಸೇರಿವೆ.

ನಿಕಟಪೂರ್ವ ಶಾಸಕರಾದ ಗಂಗಾಧರ ಭಟ್, ವಿವೇಕಾನಂದ ವೈದ್ಯ, ಶಕುಂತಳಾ ಶೆಟ್ಟಿ ಹಾಗೂ ಡಾ. ಆರ್.ಬಿ.ಶಿರಿಯಣ್ಣವರ ಅವರಿಗೆ ಅವರ ಕ್ಷೇತ್ರದಿಂದ ಟಿಕೆಟ್ ತಪ್ಪಿದ್ದರೆ, ಕ್ಷೇತ್ರ ಪುನರ್ ವಿಂಗಡಣೆಯಿಂದ ಪಕ್ಕದ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ವಹಿಸಿದರೂ ರಾಜೇಂದ್ರ ವರ್ಮಾ, ವೀರಪ್ಪ ಕೆಸರಟ್ಟಿ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಅನಿಲ್ ಲಾಡ್ ಅವರ ಹೆಸರೂ ಈ ಪಟ್ಟಿಯಲ್ಲಿ ಸೇರಿಲ್ಲ.

ಸಾಕಷ್ಟು ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ಸದಸ್ಯರಾದ ಅರವಿಂದ್ ಲಿಂಬಾವಳಿ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವ ಮೂಲಕ ಭಿನ್ನಾಭಿಪ್ರಾಯಕ್ಕೂ ದಾರಿ ಮಾಡಿಕೊಟ್ಟಂತಾಗಿದೆ. ಇತ್ತೀಚೆಗಷ್ಟೇ ಅನ್ಯ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದಿದ್ದ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಎಂ.ಮಹದೇವ್, ಬಿ.ಎನ್. ಬಚ್ಚೇಗೌಡ, ಮಾಜಿ ಸಂಸದರಾದ ಎಂ. ಶ್ರೀನಿವಾಸ್, ಬಸವರಾಜ ಪಾಟೀಲ್ ಅನ್ವರಿ, ಬಿ.ಜಿ. ಜವಳಿ, ಮಾಜಿ ಶಾಸಕರಾದ ಬಸವರಾಜ ಬೊಮ್ಮಾಯಿ, ಎಂ.ವೈ. ಪಾಟೀಲ, ಡಾ. ವೀರಬಸಂತರೆಡ್ಡಿ ಮುದ್ನಾಳ, ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣ್ಣಸಿದ್ದಯ್ಯ ಮತ್ತಿತರರಿಗೆ ಮನ್ನಣೆ ನೀಡಿ ಟಿಕೆಟ್ ನೀಡಲಾಗಿದೆ.

ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಹಾಗೂ ಬಿಜೆಪಿ ಸಂಘಟನೆ ದುರ್ಬಲವಾಗಿರುವ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಈ ಮೊದಲ ಪಟ್ಟಿಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ಬಳ್ಳಾರಿ ಜಿಲ್ಲೆಯ ಹರಹಪನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಬಿಜೆಪಿಯಿಂದ ಕರುಣಾಕರ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಸಂಸದ ಯತ್ನಾಳ ಬಿಜಾಪುರದ ಜಿಲ್ಲೆಯ ನೂತನ ಕ್ಷೇತ್ರವಾದ ದೇವರ ಹಿಪ್ಪರಗಿಯಿಂದ ಕಣಕ್ಕಿಳಿಯುತ್ತಿದ್ದಾರೆ.

ಯಶವಂತಪುರದಿಂದ ಶೋಭಾ

ಅರವಿಂದ್ ಲಿಂಬಾವಳಿ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಕ್ರಮವಾಗಿ ಮಹದೇವಪುರ ಹಾಗೂ ಯಶವಂತಪುರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಅರವಿಂದ್ ಲಿಂಬಾವಳಿ ಅವರು ಅನಂತ್ ಕುಮಾರ್ ಅವರ ಬೆಂಬಲಿಗರಾಗಿದ್ದರೆ, ಶೋಭಾ ಕರಂದ್ಲಾಜೆ ಅವರು ಯಡಿಯೂರಪ್ಪ ಅವರ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದರು. ಕಳೆದ ತಿಂಗಳಷ್ಟೇ ಬಿಜೆಪಿ ಸೇರಿದ ಸಂಜಯ್ ಖೇಣಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬೆಂಕಿ ಮಹದೇವ ಅವರಿಗೆ ಚಾಮರಾಜನಗರದಲ್ಲಿ ಟಿಕೆಟ್ ನೀಡಲಾಗಿದೆ. ಟಿಕೆಟ್ ಪಡೆದ ಎಲ್ಲರೂ ಗೆಲ್ಲುವ ಕುದುರೆಗಳೆಂಬ ಭರವಸೆಯನ್ನು ಬಿಜೆಪಿ ಹೊಂದಿದೆ.

ಶಕುಂತಳಾ ಶೆಟ್ಟಿ ಬಂಡಾಯ

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾದ ಶಕುಂತಳಾ ಶೆಟ್ಟಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಇವರು ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿಯ ಮಲ್ಲಿಕಾ ಪ್ರಸಾದ್‌ರನ್ನು ಹಿಂದಿಕ್ಕುವ ಪ್ರಯತ್ನದಲ್ಲಿದ್ದಾರೆ. ಮಾಜಿ ಶಾಸಕ ರಾಮಭಟ್ ನೇತೃತ್ವದಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿರುವುದಾಗಿ ಇವರು ತಿಳಿಸಿದ್ದಾರೆ.
ಮತ್ತಷ್ಟು
ನೀತಿ ಸಂಹಿತೆ: ಜನತಾದರ್ಶನಕ್ಕೆ ಕತ್ತರಿ
ಮುಖ್ಯಮಂತ್ರಿ ಐ ಲವ್: ಗೌಡರಿಗೆ ನೋಟೀಸ್
ಬಿಎಸ್ಪಿಯ ಪಟ್ಟಿಯೂ ಸದ್ಯವೇ ಬಿಡುಗಡೆ
ಕಣಕ್ಕಿಳಿಯದಂತೆ ಹಿರಿಯ ನಾಯಕರಿಗೆ ಹುಕುಂ
ಗೌಡರ ಹೇಳಿಕೆಗೆ ರಾಮಚಂದ್ರಗೌಡ ಟೀಕೆ
ಬಿಜೆಪಿಯೊಂದಿಗೆ ಮೈತ್ರಿಗೆ ಜೆಡಿಯು ಒಲವು