ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಬ್ಯಾನರ್ ಕಟೌಟ್‌ಗಳ ಕಡ್ಡಾಯ ತೆರವು
ಚುನಾವಣಾ ಪ್ರಚಾರಕ್ಕಾಗಿ ಪಕ್ಷಗಳು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವ ಬ್ಯಾನರ್, ಕಟೌಟ್ ಹಾಗೂ ಫ್ಲೆಕ್ಸ್ ಬೋರ್ಡುಗಳನ್ನು ಚುನಾವಣಾ ಆಯೋಗ ಕಡ್ಡಾಯವಾಗಿ ನಿಷೇಧಿಸಿರುವುದರಿಂದ ಪಕ್ಷಗಳು ಕಂಗಾಲಾಗಿವೆ.

ಚುನಾವಣಾ ಆಯೋಗ ಈ ಬಾರಿ ತನ್ನ ನೀತಿ ಸಂಹಿತೆಯನ್ನು ಬಹಳ ಕಟ್ಟುನಿಟ್ಟಿನಿಂದ ಜಾರಿಗೊಳಿಸುತ್ತಿದ್ದು, ಇದರಿಂದಾಗಿ ಸಾಮಾಗ್ರಿಗಳ ಮಾರಾಟಕ್ಕೆ ಮುಂದಾಗಿದ್ದ ಅಂಗಡಿಗಳು ಕೂಡಾ ತಲೆ ಮೇಲೆ ಕೈ ಹೊತ್ತುಕೊಳ್ಳುವಂತೆ ಆಗಿದೆ. ಯಾವುದೇ ಪಕ್ಷಗಳ ನಡುವೆಯೂ ತಾರತಮ್ಯ ಮಾಡುತ್ತಿಲ್ಲ. ಇತ್ತೀಚೆಗೆ ಮೈಸೂರು ಜಿಲ್ಲೆಯಲ್ಲಿ ಹಾಕಲಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 106 ಅಡಿ ಎತ್ತರದ ಕಟೌಟನ್ನೂ ಸಹ ಯಾವ ಮುಲಾಜು ಇಲ್ಲದೇ ಅದು ತೆರವುಗೊಳಿಸಿದೆ.

ಈಗ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಕ್ರಮ ಬ್ಯಾನರ್, ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲು ವಿಶೇಷ ಕಾರ್ಯಾಚರಣೆ ಪಡೆ ರಚಿಸಲಾಗಿದೆ. ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಎಸ್.ರಾಮಪ್ರಸಾದ್ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಪಾಲಿಕೆ ವ್ಯಾಪ್ತಿಯೊಳಗೆ ಬರುವ 21 ವಿಧಾನಸಭೆ ಕ್ಷೇತ್ರಗಳಲ್ಲೂ ಸಂಚರಿಸುವ ಕಾರ್ಯಪಡೆ, ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಿದೆ.

ಬಿಬಿಎಂಪಿಯ 8 ವಲಯಗಳಲ್ಲೂ ಇದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ಸಜ್ಜುಗೊಳಿಸಲಾಗಿದೆ. ಆಯಾ ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್, ಮುಖ್ಯ ಆರೋಗ್ಯಧಿಕಾರಿ ಹಾಗೂ ತೋಟಗಾರಿಕೆ ಅಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಸ್ಥಳೀಯ ಪೊಲೀಸರು ರಕ್ಷಣೆ ನೀಡಿ ಸಹಕರಿಸಲಿದ್ದಾರೆ.

ಅನಧಿಕೃತ ಬ್ಯಾನರ್ ಪ್ರದರ್ಶನ ಮಾಡುವ ಸಂಸ್ಥೆ, ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದೇ ಅಲ್ಲದೇ ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲೂ ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ತಿಲಿದುಬಂದಿದೆ.

10 ಸಾವಿರ ಬ್ಯಾನರ್, ಕಟೌಟ್ ತೆರವು

ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಬಿಬಿಎಂಪಿ ಅಧಿಕಾರಿಗಳು 10 ಸಾವಿರಕ್ಕೂ ಹೆಚ್ಚು ಬ್ಯಾನರ್, ಕಟೌಟ್, ಬಂಟಿಂಗ್ಸ್‌ಗಳನ್ನು ತೆಗೆದು ಹಾಕಿದ್ದಾರೆ. ಕಾರ್ಯಾಚರಣೆ ವೇಳೆ ಕೆಲವೆಡೆ ಸಿಬ್ಬಂದಿ ಹಾಗೂ ರಾಜಕೀಯ ಪಕ್ಷಗಳ ನಡುವೆ ಘರ್ಷಣೆಗಳಾಗಿರುವುದೂ ಸಹ ಗಮನಾರ್ಹ ಅಂಶ.

ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಯಾವುದೇ ನಗರ, ಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಾಮಗ್ರಿ ಪ್ರದರ್ಶಿಸಲು ಅಲ್ಲಿನ ಸೇವಾ ಸಂಸ್ಥೆಯ ಅನುಮತಿ ಪಡೆದು ನಿಗದಿತ ಶುಲ್ಕ ಪಾವತಿಸಬೇಕು. ಇದಕ್ಕೆ ಖಾಸಗಿ ಸ್ಥಳದಲ್ಲಿ ಮಾತ್ರ ಅವಕಾಶ. ಜಾಗದ ಮಾಲೀಕರ ಒಪ್ಪಿಗೆ ಪಡೆದು ಪೌರ ಸೇವಾ ಸಂಸ್ಥೆಯ ಅನುಮತಿಯೊಡನೆ ನಿಯಮಾನುಸಾರ ಬ್ಯಾನರ್ ಪ್ರದರ್ಶಿಸಬಹುದು ಎಂದು ತಿಳಿದುಬಂದಿದೆ.
ಮತ್ತಷ್ಟು
ಟಿಕೆಟ್ ಹಂಚಿಕೆ: ಭಿನ್ನಮತವಿಲ್ಲ ಎಂದ ಯಡಿಯೂರ್
ಅಣ್ಣಾವ್ರು ಅಗಲಿ ಅದಾಗಲೇ ಎರಡು ವರ್ಷ
ಪರಿಮಳಾ ನಾಗಪ್ಪ ಬಿಎಸ್ಪಿಗೆ
'ಚಿಲ್ಲರೆ' ಸಮಸ್ಯೆ: ಹೊಟೇಲಿಗರ ಆಕ್ರೋಶ
ನೀತಿಸಂಹಿತೆ ಉಲ್ಲಂಘನೆ ಬಗ್ಗೆ ದೂರು: ಗೌಡ
ಕಾಮಣ್ಣ ಶಿಕ್ಷಕ 'ಮಾವನ ಮನೆಗೆ'