ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡ ಸಾಹಿತ್ಯ ದಿಗ್ಗಜ ಶಾಂತರಸ ಇನ್ನಿಲ್ಲ
ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ದಿಗ್ಗಜ, ನೇರ ನಡೆ-ನುಡಿಗೆ ಹೆಸರಾಗಿರುವ ಡಾ. ಶಾಂತರಸ ಹೆಂಬೇರಾಳು (84) ಭಾನುವಾರ ಸಂಜೆ ನಿಧನರಾದರು. ಸೋಮವಾರ ಮಧ್ಯಾಹ್ನ ಗುಲ್ಬರ್ಗಾದ ಜೇವರ್ಗಿ ರಸ್ತೆ ಬಳಿ ಇರುವ ಮುಕ್ತಿಧಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಶಾಂತರಸ ಅವರನ್ನು ಇಲ್ಲಿಯ ಧನ್ವಂತ್ರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ ಭಾನುವಾರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಸಂಜೆ 6.30 ಸುಮಾರಿಗೆ ಕೊನೆಯುಸಿರೆಳೆದರು. ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ತಮ್ಮ ಜೀವನದುದ್ದಕ್ಕೂ ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದ ಶಾಂತರಸ, ಬೀದರಿನಲ್ಲಿ ನಡೆದ 72ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಜೀವನದ ಬಹುತೇಕ ಭಾಗವನ್ನು ಕನ್ನಡದ ಹೋರಾಟಕ್ಕಾಗಿ ಮುಡಿಪಾಗಿಟ್ಟಿದ್ದ ಅವರು, ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಒತ್ತಾಯಿಸಿದ್ದರು. ಅಲ್ಲದೆ, ಕನ್ನಡ ಮತ್ತು ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸದ ಮತ್ತು ಭ್ರಷ್ಟಾಚಾರದ ತುಂಬಿದ ಸರ್ಕಾರದಿಂದ ತಾನು ಯಾವುದನ್ನೂ ಬಯಸುವುದಿಲ್ಲವೆಂದು 1992ರಲ್ಲಿ ತಮಗೆ ಬಂದ ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಿದ್ದರು.

ಕನ್ನಡ ಸಾಹಿತ್ಯ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಇವರು, ಬಹುತೇಕ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಕೈ ಆಡಿಸಿದ್ದಾರೆ. ನಾಲ್ಕು ಕಾವ್ಯ, ಐದು ಕಥಾ ಸಂಕಲನ, ಒಂದು ಕಾದಂಬರಿ, ನಾಲ್ಕು ನಾಟಕ, ಒಂದು ಪ್ರಬಂಧ, ಐದು ಜೀವನ ಚರಿತ್ರೆ, ಸಂಶೋಧನೆ ಮತ್ತು ಸಂಪಾದನಾ ಗ್ರಂಥ ಸೇರಿದಂತೆ ಹಲವು ಗ್ರಂಥಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಮುಖ್ಯವಾಗಿ ಗೌಡಸಾನಿ ಪುರಾಣ, ಬಡೇಸಾಬು ಪುರಾಣ, ಬಾರಾಮಾಸ, ನಾಯಿ ಮತ್ತು ಪಿಂಚಣಿ ಮೊದಲಾದ ಕೃತಿಗಳು ಇಂದು ಕೂಡ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಶಾಂತರಸ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ.
ಮತ್ತಷ್ಟು
ಬಿಜೆಪಿಯ 2ನೇ ಪಟ್ಟಿ: ಅಸಮಾಧಾನ ಸ್ಫೋಟ
ಎನ್ಕೌಂಟರ್ ದಯಾನಾಯಕ್ ಕಾಂಗ್ರೆಸ್‌ಗೆ?
ಎರಡು ಕ್ಷೇತ್ರದಲ್ಲಿ ಯಡಿಯೂರಪ್ಪ ಸ್ಪರ್ಧೆ
ಸಿದ್ದಾಂತ ಮರೆತ ಬಿಜೆಪಿ, ಜೆಡಿಎಸ್: ಸಿಬಲ್
ಮುರುಡೇಶ್ವರ ರಾಜಗೋಪುರ ಲೋಕಾರ್ಪಣೆ
ಬಿಜೆಪಿಯೊಳಗೆ ಬಂಡಾಯವಿಲ್ಲ: ಡಿವಿಎಸ್