ರಾಜ್ಯ ಬಿಜೆಪಿ ಮಹಿಳೆಯರಿಗೆ ಮಣೆ ಹಾಕುತ್ತಿಲ್ಲ ಎಂಬ ಕೂಗಿಗೆ ಪ್ರತ್ಯುತ್ತರವಾಗಿ ಬಿಜೆಪಿ ಮಂಗಳವಾರ ಬೃಹತ್ ಮಹಿಳಾ ಸಮಾವೇಶದ ಮೂಲಕವೇ ಪ್ರಚಾರ ಕಾರ್ಯಕ್ಕೆ ಇಳಿದಿದೆ. ಈ ಬಗ್ಗೆ ವಿವರಣೆ ನೀಡಿರುವ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ, ಇದು ಮಹಿಳಾ ಸಮಾವೇಶವಾದರೂ, ಇದೊಂದು ಚುನಾವಣಾ ಸಮಾವೇಶ ಎಂದು ತಿಳಿಸಿದ್ದಾರೆ.
ಕಳೆದ 25ರಂದೇ ನಡೆಯಬೇಕಿದ್ದ ಮಹಿಳಾ ಸಮಾವೇಶ ಮಳೆಯ ಕಾರಣದಿಂದ ಇಂದಿಗೆ ಮುಂದೂಡಲ್ಪಟ್ಟಿತ್ತು. ಮೈಸೂರಿನಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಭಾಗದಲ್ಲೇ ತನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿರುವ ಬಿಜೆಪಿ, ಇಂದು ಶಕ್ತಿ ಪ್ರದರ್ಶನ ನಡೆಸಲಿದೆ.
ಅಲ್ಲದೆ, ಈಗಾಗಲೇ ಜೆಡಿಎಸ್ ಜೈತ್ರೆಯಾತ್ರೆ ಹಾಗೂ ಕಾಂಗ್ರೆಸ್ ರೈತರ ಜನಾಂದೋಲನದ ಮೂಲಕ ಇದೇ ಭಾಗದಲ್ಲಿ ತನ್ನ ಚುನಾವಣಾ ಪ್ರಚಾರವನ್ನು ಕೈಗೊಂಡಿತ್ತು. ಈಗ ಬಿಜೆಪಿ ಸರದಿ. ಸಮಾವೇಶಕ್ಕಾಗಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ರನ್ನು ದೆಹಲಿಯಿಂದ ಕರೆಸಲಾಗಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತ್ ಕುಮಾರ್, ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದಾರೆ.
ಪಕ್ಷದಲ್ಲಿ ಆಂತರಿಕ ಭಿನ್ನಮತ ಇಲ್ಲ ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸುಷ್ಮಾ ಸ್ವರಾಜ್, ಪಕ್ಷದಲ್ಲಿ ಆಂತರಿಕ ಭಿನ್ನಮತ ಎದ್ದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಟಿಕೆಟ್ ದುಡ್ಡಿನ ಮೇಲೆ ಹಂಚಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|