ಬೆಂಗಳೂರು: ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬುಧವಾರ ಸಂಜೆ ಅಂತಿಮಗೊಳಿಸಲಿದೆ ಎಂದು ಹೇಳಲಾಗಿದೆ.
ಮೊದಲ ಹಂತದ ಪಟ್ಟಿಯನ್ನು ಈಗಾಗಲೇ ಹೈಕಮಾಂಡ್ ರವಾನೆಯಾಗಿದ್ದು, ಪಟ್ಟಿಯ ಜೊತೆಯಲ್ಲಿ ಕಾಂಗ್ರೆಸ್ ನಾಯಕರ ದಂಡು ದೆಹಲಿಗೆ ತೆರಳಿದೆ. ಇಂದು ನಡೆಯಲಿರುವ ಮಹತ್ವದ ಸಭೆಯ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ಯುವಕರಿಗೆ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಯುವ ನಾಯಕರ ಅಭಿಪ್ರಾಯವಾದರೆ, ಎಲ್ಲಾ ಮಾಜಿ ಶಾಸಕರಿಗೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಈಗಾಗಲೇ ಘೋಷಿಸಿದ್ದಾರೆ. ಏತನ್ಮಧ್ಯೆ, ಟಿಕೆಟ್ ವಂಚಿತ ಅಭ್ಯರ್ಥಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆ ಕುರಿತು ಭಿನ್ನಮತವೆದ್ದಿದೆ.
ಮರಳಿ ಗೂಡಿಗೆ: ಈ ಮಧ್ಯೆ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್. ಬಂಗಾರಪ್ಪ ಕಾಂಗ್ರೆಸ್ ಹೈಕಮಾಂಡ್ ಬಾಗಿಲನ್ನು ತಟ್ಟಿದ್ದಾರೆ. ಈ ಮೊದಲು ಜೆಡಿಎಸ್ ಜೊತೆ ಮೈತ್ರಿಗೆ ಬಂಗಾರಪ್ಪ ಮುಂದಾಗಿದ್ದರೂ, ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿದ್ದುದರಿಂದ ಮರಳಿ ಗೂಡಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕರಾಗಿರುವ ಕಾಗೋಡು ತಿಮ್ಮಪ್ಪನವರ ಜೊತೆ ಮಾತುಕತೆ ನಡೆದಿದ್ದು, ಇಂದು ಅಥವಾ ನಾಳೆ ಅಂತಿಮ ನಿರ್ಧಾರ ಕೈಗೊಳ್ಳುವ ನೀರೀಕ್ಷೆ ವ್ಯಕ್ತವಾಗಿದೆ. ಆದರೆ ಬಂಗಾರಪ್ಪ ಕಾಂಗ್ರೆಸ್ ಸೇರುವುದು ಕೆಪಿಸಿಸಿಯ ಹಿರಿಯ ಮುಖಂಡರಿಗೆ ಇದು ಅಸಮಾಧಾನದ ವಿಷಯ. ಬಂಗಾರಪ್ಪನವರದ್ದು ತುಂಬಾ ತಡವಾದ ನಿರ್ಧಾರವಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಪ್ರಕಟಿಸಿದ್ದಾರೆ.
|