ಗೂಡ್ಸ್ ಲಾರಿ ಹಾಗೂ ಆಟೋ ರಿಕ್ಷಾವೊಂದು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣದ ಮಟ್ಟನವಿಲೆ ಬಳಿ ಸಂಭವಿಸಿದೆ.
ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರನ್ನು ಬೆಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಇವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದವರನ್ನು ಚೆನ್ನರಾಯಪಟ್ಟಣದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಗೂಡ್ಸ್ ಲಾರಿ ಬೆಂಗಳೂರಿನಿಂದ ಚೆನ್ನರಾಯಪಟ್ಟಣಕ್ಕೆ ತೆರಳುತ್ತಿದ್ದಾಗ ಮಟ್ಟನವಿಲೆ ಸಮೀಪ ಅಡ್ಡರಸ್ತೆಯಿಂದ ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಆಟೋ ಚಾಲಕನ ಅಜಾಗರೂಕತೆಯಿಂದಾಗಿಯೇ ಈ ದುರ್ಘಟನೆ ಸಂಭವಿಸಿದೆ ಎಂದು ಮೊದಲ ಹಂತದ ತನಿಖೆಯಿಂದ ತಿಳಿದು ಬಂದಿದೆ.
|