ಮತದಾರರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಿರುವ ಚುನಾವಣಾ ಆಯೋಗವು ಇದಕ್ಕಾಗಿ ಹೊಸ ರೀತಿಯ ಡ್ರಾಪ್‌ಬಾಕ್ಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಜನತೆ ಗುರುತು ಚೀಟಿ ಪಡೆಯಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಮುಖ್ಯ ಚುನಾವಣಾಧಿಕಾರಿ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಗುರುತಿನ ಚೀಟಿ ಪಡೆಯ ಬಯಸುವವರು ಭಾವಚಿತ್ರದ ಸಹಿತ ಅರ್ಜಿಯನ್ನು ನಗರದ ವಿವಿಧೆಡೆ ಸ್ಥಾಪಿಸಲಾಗುವ 24 ಗಂಟೆಯೂ ಕಾರ್ಯನಿರ್ವಹಿಸುವ ಡ್ರಾಪ್ ಬಾಕ್ಸ್‌ನಲ್ಲಿ ಹಾಕಿದರೆ 24 ಗಂಟೆಗಳ ಒಳಗಾಗಿ ಗುರುತಿನ ಚೀಟಿ ನೀಡಲಾಗುತ್ತದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಮತ್ತು ಇಂತಹ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದವರ ಅನುಕೂಲಕ್ಕಾಗಿ ಬೆಂಗಳೂರು ನಗರದ ವಿವಿಧ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಡ್ರಾಪ್ ಬಾಕ್ಸ್ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ಮಧ್ಯರಾತ್ರಿಯಲ್ಲೂ ಗುರುತಿನ ಚೀಟಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಜತೆಯಲ್ಲಿ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿರಬೇಕು. ಅರ್ಜಿಯನ್ನು ಡ್ರಾಪ್ ಬಾಕ್ಸ್‌ನಲ್ಲಿ ಹಾಕಿದ 24 ಗಂಟೆಗಳಲ್ಲೇ ಗುರುತಿನ ಚೀಟಿ ನೀಡಲಾಗುವುದು ಎಂದು ತಿಳಿಸಿದರು.
ಡ್ರಾಪ್ ಬಾಕ್ಸ್‌ನಲ್ಲಿ ಯಾರು ಬೇಕಾದರೂ ಅರ್ಜಿಯನ್ನು ಹಾಕಬಹುದು. ಆದರೆ ಗುರುತಿನ ಚೀಟಿಯನ್ನು ಮಾರನೆಯ ದಿನ ಕಡ್ಡಾಯವಾಗಿ ಅರ್ಜಿದಾರರೇ ಪಡೆದುಕೊಳ್ಳಬೇಕು ಎಂದು ವಿದ್ಯಾಶಂಕರ್ ಸ್ಪಷ್ಟಪಡಿಸಿದರು.
ಬೆಂಗಳೂರು ನಗರದಲ್ಲಿ ಮಾತ್ರ ಗುರುತಿನ ಚೀಟಿ ಪಡೆಯುವ ಸಮಸ್ಯೆ ಎದುರಾಗಿದ್ದರಿಂದ ಈ ಸೌಲಭ್ಯವನ್ನು ಬೆಂಗಳೂರು ಹಾಗೂ ಸುತ್ತಮುತ್ತಲಿನ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಮಾತ್ರ ಒದಗಿಸಲಾಗುವುದು. ರಾಜ್ಯದ ಉಳಿದೆಡೆಯಲ್ಲಿ ಈ ರೀತಿಯ ಸಮಸ್ಯೆ ಎದುರಾಗಿಲ್ಲ. ಕಳೆದ ಬಾರಿ ಗುರುತಿನ ಚೀಟಿ ಪಡೆದವರು ಈ ಬಾರಿ ಪಡೆಯಬೇಕಾಗಿಲ್ಲ. ಇದುವರೆಗೆ ಗುರುತಿನ ಚೀಟಿ ಪಡೆಯದ ಅರ್ಹ ಮತದಾರರಿಗೆ ಮಾತ್ರ ನೀಡಲಾಗುತ್ತದೆ. ದೋಷಪೂರಿತ ಗುರುತಿನ ಚೀಟಿ ಹೊಂದಿರುವವರು ಮತ್ತು ಕಳೆದುಕೊಂಡವರಿಗೆ ಈ ಬಾರಿ ನೀಡಲಾಗುವುದಿಲ್ಲ. ಗುರುತಿನ ಚೀಟಿ ಸಿಗದ ಮತದಾರರು ಜೂನ್ ತಿಂಗಳಲ್ಲಿ ಮತ್ತೆ ಪ್ರಾರಂಭಿಸುವ ಕಾರ್ಯಕ್ರಮದಲ್ಲಿ ಗುರುತಿನ ಚೀಟಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದರು.
|