ಲಕ್ಷಾಂತರ ವಿದ್ಯಾರ್ಥಿಗಳ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಭವಿಷ್ಯ ನಿರ್ಧಾರವಾಗುವ ಮಹತ್ವದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಾಳೆ ರಾಜ್ಯದಾದ್ಯಂತ ನಡೆಯಲಿದೆ. ಈ ಬಾರಿ ಒಟ್ಟು 1,14,357 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪ್ರತಿ ವರ್ಷ ಎರಡು ದಿನಗಳ ಕಾಲ ನಡೆಯುತ್ತಿದ್ದ ಸಿಇಟಿ ಪರೀಕ್ಷೆ ಈ ಬಾರಿ ಒಂದೇ ದಿನ ನಡೆಯುತ್ತಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದ ಒಟ್ಟು 218 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕಾರ್ಯಕ್ಕಾಗಿ ಒಟ್ಟು ಎಂಟು ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಮೂವರು ಮುಖ್ಯ ಪರೀಕ್ಷಾ ಮೇಲ್ವಿಚಾರಕರನ್ನು ನಿಯೋಜಿಸಲಾಗುತ್ತದೆ.
ಈ ವರ್ಷ ಸಿಇಟಿ ಪರೀಕ್ಷೆಗೆ ರಾಜ್ಯದ ಪದವಿ ಪೂರ್ವ ಕಾಲೇಜುಗಳಿಂದ ಒಟ್ಟು 1.07 ಲಕ್ಷ ವಿದ್ಯಾರ್ಥಿಗಳು, ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮದ 3,200 ವಿದ್ಯಾರ್ಥಿಗಳು ಹಾಗೂ ಹೊರನಾಡು-ಗಡಿನಾಡು ಮತ್ತು ಜಮ್ಮು-ಕಾಶ್ಮೀರ ರಾಜ್ಯದಿಂದ ಒಟ್ಟು 4,500 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಏ.20 ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಸುಮಾರು 4,500 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದು ಗಡಿನಾಡ ಹಾಗೂ ಹೊರನಾಡ ಕನ್ನಡಿಗರಿಗೆ ಮಾತ್ರ ಸೀಮಿತವಾಗಿರುತ್ತದೆ. ಏ. 20ರಂದು ಅನಿವಾರ್ಯ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಮೇ 30 ರಂದು ಮತ್ತೊಂದು ಅವಕಾಶ ನೀಡಲಾಗುತ್ತದೆ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
|