ತೀವ್ರ ಕುತೂಹಲ ಮೂಡಿಸಿರುವ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಸಂಬಂಧ ಕಳೆದ ಎರಡು ದಿನಗಳಿಂದ ಎಸ್ಪಿ ರಾಜ್ಯಾಧ್ಯಕ್ಷ ಎಸ್. ಬಂಗಾರಪ್ಪ ಕಾಂಗ್ರೆಸ್ ಹಾಗೂ ತಮ್ಮ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದರು.
ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆಗಾಗಿ ಪಣ ತೊಟ್ಟಿರುವ ಕಾಂಗ್ರೆಸ್, ಶಿಕಾರಿಪುರದಲ್ಲಿ ಬಿಜೆಪಿ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಎದುರು ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ಯೋಜನೆ ನಡೆಸಿತ್ತು.
ಆದರೆ ಮಾತುಕತೆಗಾಗಿ ಬಂಗಾರಪ್ಪ ದೆಹಲಿಗೆ ತೆರಳಿದ್ದರೂ, ಮೈತ್ರಿ ಕುರಿತು ಯಾವುದೇ ಚರ್ಚೆ ನಡೆಸಲಿಲ್ಲ. ನಗರಕ್ಕೆ ವಾಪಸಾದ ಅವರು, ಅನಾರೋಗ್ಯದಿಂದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್ ಜೊತೆಗಿನ ಚುನಾವಣಾ ಮೈತ್ರಿ ಹೊಂದಾಣಿಕೆ ಮಾತುಕತೆಗೆ ತಡೆಯಾಗಿದೆ.
ಈ ಮಧ್ಯೆ, ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕೂಡ ಕಾಂಗ್ರೆಸ್ ಹೊಂದಾಣಿಕೆ ಪ್ರಕ್ರಿಯೆಯನ್ನು ನಿಲ್ಲಿಸಲು ಕಾರಣ ಎನ್ನಲಾಗಿದೆ. ಅಲ್ಲದೆ, ಬಂಗಾರಪ್ಪ ಸೀಟು ಹೊಂದಾಣಿಕೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂಬ ವಿಚಾರವನ್ನು ಮಧು ಬಂಗಾರಪ್ಪ ದೇವೇಗೌಡರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
|