ಮೊದಲ ಹಂತದ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಇಂದು(ಶುಕ್ರವಾರ) ಮಹಾವೀರ ಜಯಂತಿ ಪ್ರಯುಕ್ತ ನಾಮಪತ್ರ ಸಲ್ಲಿಕೆಗೆ ರಜೆ ಘೋಷಿಸಲಾಗಿದೆ.
ಕಳೆದೆರಡು ದಿನಗಳಿಂದ ಒಟ್ಟು 49 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 12, ಮೈಸೂರು ಜಿಲ್ಲೆಯಲ್ಲಿ 10, ತುಮಕೂರಿನಲ್ಲಿ 4, ಕೋಲಾರದಲ್ಲಿ 5 ಮಂಡ್ಯದಲ್ಲಿ 3, ಬೆಂಗಳೂರು ನಗರ ಜಿಲ್ಲೆಯಲ್ಲಿ 2 ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಹಾಸನದಲ್ಲಿ ತಲಾ ಒಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಮಾಜಿ ಶಾಸಕ ಪಿ.ಸಿ. ಮೋಹನ್ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಹಾಗೂ ಬಾಗೇಪಲ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಚಿತ್ರನಟ ಸಾಯಿಕುಮಾರ್ ಅವರು ನಾಮಪತ್ರ ಸಲ್ಲಿಸಿದರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪಿ. ಸುರೇಶ್ ನಾಯಕ್ ಹಾಗೂ ಮಂಡ್ಯ ಜಿಲ್ಲೆ ಮೇಲುಕೋಟೆಯಿಂದ ಕರ್ನಾಟಕ ಸರ್ವೋದಯ ಪಕ್ಷದಿಂದ ರಾಜ್ಯ ರೈತ ಸಂಘದ ಕೆ.ಎಸ್. ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ.
ಮೊದಲ ಹಂತದ ಚುನಾವಣೆಯ ಒಟ್ಟು 89 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಕೊನೆಯ ದಿನಾಂಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪಕ್ಷಗಳು ಶೀಘ್ರದಲ್ಲಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ
|