ಯಾವುದೇ ಕಾರಣಕ್ಕೂ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ತಿಳಿಸಿದ್ದರೆ, ಹೊಂದಾಣಿಕೆ ಕುರಿತು ಮಾತುಕತೆ ಪ್ರಗತಿಯಲ್ಲಿದೆ ಎಂದು ಪಕ್ಷದ ಮುಖಂಡ ಡಿ.ಟಿ. ಜಯಕುಮಾರ್ ತಿಳಿಸಿದ್ದಾರೆ.
ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್, ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಂಗಾರಪ್ಪನವರ ಈ ನಿರ್ಧಾರ ತಡವಾಗಿದೆ. ಆದ್ದರಿಂದ ಎಸ್ಪಿ ಜೊತೆಗಿನ ಮಾತುಕತೆ ಮುಗಿದ ಅಧ್ಯಾಯ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ 107 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಳಿಸಿದೆ ಎಂದು ತಿಳಿಸಿರುವ ಮಾಜಿ ಸಚಿವ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಡಿ.ಟಿ. ಜಯಕುಮಾರ್, ಸಮಾಜವಾದಿ ಪಕ್ಷದ ಜೊತೆಗೆ ಜೆಡಿಎಸ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಮಧು ಬಂಗಾರಪ್ಪನವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ಬಂಗಾರಪ್ಪನವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಜೆಡಿಎಸ್ ನಾಯಕರ ನಡುವೆಯೇ ಮೈತ್ರಿ ಕುರಿತಾದ ಗೊಂದಲ ಸ್ಪಷ್ಟವಾಗಿದ್ದು, ಇನ್ನೆರಡು ದಿನಗಳಲ್ಲಿ ಎಸ್ಪಿ-ಜೆಡಿಎಸ್ ಮೈತ್ರಿ ಕುರಿತಾದ ಸ್ಪಷ್ಟ ನಿಲುವು ಜೆಡಿಎಸ್‌ನಿಂದ ಹೊರಬರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
|