ಬಳ್ಳಾರಿ: ಸೂಕ್ತ ದಾಖಲೆಗಳು ಇಲ್ಲದೆ ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಎರಡು ಎರಡು ಟಾಟಾ ಸುಮೋ ವಾಹನಗಳಲ್ಲಿ ಸಾಗಿಸುತ್ತಿದ್ದ 10 ಕೋಟಿ ರೂ. ನಗದನ್ನು ಗಾಂಧಿನಗರ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಕರ್ನೂಲ್‌ನಿಂದ ಆಕ್ಸಿಸ್ ಬ್ಯಾಂಕಿಗೆ ಸೇರಿದ 10 ಕೋಟಿ ರೂ. ನಗದನ್ನು ಎರಡು ಟಾಟಾ ಸುಮೋದಲ್ಲಿ ಅದೇ ಬ್ಯಾಂಕಿನ ಬಳ್ಳಾರಿ ಶಾಖೆಗೆ ತರಲಾಗುತ್ತಿತ್ತು ಎನ್ನಲಾಗಿದೆ. ನಗರ ಹೊರ ವಲಯದ ಸಂಗನಕಲ್ಲು ರಸ್ತೆಯಲ್ಲಿ ಸಂಜೆ 5.30ರ ಸುಮಾರಿಗೆ ಕೆಇಬಿ ಚೆಕ್ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ನಗದು ಹಣದ ಸಾಗಣೆ ಪತ್ತೆಯಾಗಿದೆ.
ಆದರೆ, ನಗದು ಸಾಗಣೆ ವೇಳೆಯಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯ ದಾಖಲೆಗಳನ್ನು ಪ್ರಾಥಮಿಕ ವಿಚಾರಣೆ ವೇಳೆ ಹಾಜರುಪಡಿಸುವಲ್ಲಿ ಬ್ಯಾಂಕಿನ ಸಿಬ್ಬಂದಿ ವಿಫಲರಾದರು. ಈ ಹಿನ್ನೆಲೆಯಲ್ಲಿ ಎರಡೂ ವಾಹನಗಳನ್ನು ವಶಪಡಿಸಿಕೊಂಡು ಮೂವರು ಖಾಸಗಿ ಭದ್ರತಾ ಸಿಬ್ಬಂದಿ ಸೇರಿದಂತೆ 7 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ.
ಭದ್ರತಾ ಸಿಬ್ಬಂದಿ ಬಳಿ ಇದ್ದ ಮೂರು ಡಬಲ್ ಬ್ಯಾರೆಲ್ ಗನ್‌ಗೆ ಲೈಸೆನ್ಸ್ ಇಲ್ಲದಿರುವುದು, ಬ್ಯಾಂಕ್ ಮತ್ತು ಭದ್ರತಾ ಸಿಬ್ಬಂದಿ ಬಳಿ ಗುರುತಿನ ಚೀಟಿ ಇಲ್ಲದಿರುವುದು ಹಾಗೂ ನಗದು ಸಾಗಣೆ ವೇಳೆ ಪೊಲೀಸ್ ಭದ್ರತೆ ತೆಗೆದುಕೊಳ್ಳದಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ.
|