ತಮ್ಮ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕೆಂದು ಆಗ್ರಹಿಸಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ನಕಲಿ ಛಾಪಾಕಾಗದ ಹಗರಣದ 21 ಆರೋಪಿಗಳು ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಮಾಜಿ ಸಚಿವ ರೋಷನ್ ಬೇಗ್ ಸೋದರ ರೆಹಾನ್ ಬೇಗ್, ಸದಾಶಿವ ಹಾಗೂ ಇತರರು ಕಾರಾಗೃಹದ ಅಧೀಕ್ಷಕ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಕ್ಕೆ ಬರುವ ನ್ಯಾಯಾಧೀಶರು ವಿಚಾರಣೆ ಅಂತಿಮ ಹಂತ ತಲುಪುವ ಮುನ್ನವೇ ವರ್ಗಾವಣೆಯಾಗುತ್ತಿದ್ದಾರೆ. ಹೊಸದಾಗಿ ಆಗಮಿಸುವ ನ್ಯಾಯಾಧೀಶರು ಪ್ರಕರಣಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದಾಗಿ ಉಂಟಾಗುವ ವಿಳಂಬದಿಂದ ತಾವು ಜೈಲಿನಲ್ಲಿ ಮತ್ತಷ್ಟು ದಿನ ಇರುವಂತಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಕೂಡಲೇ ಇಂತಹ ವರ್ಗಾವಣೆ ಪ್ರಕ್ರಿಯೆಯನ್ನು ನಿಲ್ಲಿಸಿ ಖಾಯಂ ನ್ಯಾಯಮೂರ್ತಿಗಳನ್ನು ನಿಯೋಜಿಸಬೇಕು. ಛಾಪಾ ಕಾಗದ ಹಗರಣದ ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಧೀಶರನ್ನು ಬೇರೆಡೆಗೆ ವರ್ಗಾಯಿಸಬಾರದು ಎಂದು ಒತ್ತಾಯಿಸಿದ್ದಾರೆ.
ಬೆಳಗ್ಗೆ ಮನವಿ ಸಲ್ಲಿಸಿದ ವಿಚಾರಣಾಧೀನ ಕೈದಿಗಳು ಮಧ್ಯಾಹ್ನ ಊಟ ಸೇವಿಸಲಿಲ್ಲ. ವಿಚಾರಣಾಧೀನ ಕೈದಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸರ್ಕಾರಕ್ಕೆ ಮನವಿಪತ್ರ ಕಳುಹಿಸಿದ್ದಾರೆ. ಮೇಲಧಿಕಾರಿಗಳಿಂದ ಈ ಸಂಬಂಧ ಯಾವುದೇ ಉತ್ತರ ಬಂದಿಲ್ಲ ಎನ್ನಲಾಗಿದೆ.
|