ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದ ಡಿ.ಟಿ.ಜಯಕುಮಾರ್ ಜೆಡಿಎಸ್ ತೊರೆದು ಬಿಎಸ್ಪಿ ಸೇರಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಜಯಕುಮಾರ್ ಹೆಸರನ್ನು ಪ್ರಕಟಿಸಿಲ್ಲ. ಇದರಿಂದ ಅಸಮಾಧಾನಗೊಂಡ ಡಿಟಿಜೆ ತನಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. ಅದರೆ ವರಿಷ್ಠರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲು ಸಾಧ್ಯವಿಲ್ಲ. ಇಚ್ಛೆಯಿದ್ದರೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದರು.
ಇದರಿಂದ ಅಸಮಾಧಾನಗೊಂಡ ಡಿಟಿಜೆ ಬೆಂಬಲಿಗರು ಪ್ರತಿಭಟನೆ ಮುಂದಾದರು. ಡಿಟಿಜೆಯ ಅಸಮಾಧಾನವನ್ನು ಉಪಯೋಗಿಸಿಕೊಂಡ ಬಿಜೆಪಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಿತು. ಆದರೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಬುಧವಾರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ ಜಯಕುಮಾರ್ ಇಂದು ಬಿಎಸ್ಪಿಗೆ ಸೇರಿದ್ದು, ಅವರು ಬಿಎಸ್ಪಿಯಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.
ಜಯಕುಮಾರ್ ಅವರ ಮನವೊಲಿಸುವ ಪ್ರಯತ್ನವನ್ನು ಪಕ್ಷದ ಮುಖಂಡರಾದ ಮೆರಾಜುದ್ದೀನ್ ಪಟೇಲ್, ಸಂಸದೀಯ ಮಂಡಳಿ ಅಧ್ಯಕ್ಷ ಡಿ.ಮಂಜುನಾಥ್ ಮಾಡಿದರೂ ಅದು ಫಲಕಾರಿಯಾಗಲಿಲ್ಲ.
ಒಂದು ಕಾಲದಲ್ಲಿ ತಮ್ಮ ಮಾತಿನಿಂದ ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬದ ರಕ್ಷಕನಂತೆ ಮಾತನಾಡುತ್ತಿದ್ದ ಜಯಕುಮಾರ್, ಸಿದ್ಧರಾಮಯ್ಯ ಜೆಡಿಎಸ್ ತ್ಯಜಿಸಿದಾಗಲೂ ದೇವೇಗೌಡರ ಪರ ವಹಿಸಿ ಮಾತನಾಡಿದ್ದರು. ಮತ್ತೆ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಬಿಜೆಪಿಗೆ ಅಧಿಕಾರ ನೀಡದ ಸಮಯದಲ್ಲೂ ಕುಮಾರಸ್ವಾಮಿಯವರ ಪರ ವಹಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ನಾಲಾಯಕ್ಕು ಎಂದು ಹೇಳಿ ಕುಮಾರಸ್ವಾಮಿಯವರನ್ನು ಜನರ ಟೀಕೆಯಿಂದ ರಕ್ಷಿಸುವ ಪ್ರಯತ್ನ ಮಾಡಿದ್ದರು. ಇಂತಹ ಡಿ.ಟಿ. ಜಯಕುಮಾರ್ ತಾನೇ ಸ್ವತ: ಪಕ್ಷದಿಂದ ಹೊರನಡೆಯಬೇಕಾಗಿ ಬಂದುದು ರಾಜಕೀಯ ವಿಪರ್ಯಾಸಗಳಲ್ಲೊಂದು.
|