ತಾನು ಎಲ್ಲದಕ್ಕೂ ಜ್ಯೋತಿಷ್ಯದ ಮೇಲೆಯೇ ಅವಲಂಬಿತನಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅಥವಾ ಕಾಂಗ್ರೆಸ್ ನಾಯಕರು ಹೇಳುವಂತೆ ಜ್ಯೋತಿಷ್ಯವನ್ನು ನಂಬಿ ಚನ್ನಪಟ್ಟಣದಲ್ಲಿ ಕಣಕ್ಕಿಳಿಯಲು ಇಚ್ಛಿಸಿಲ್ಲ ಎಂದು ಅವರು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿ, ರಾಮನಗರದಿಂದ ಮಾತ್ರವೇ ತಮ್ಮ ಸ್ಪರ್ಧೆ ಎಂಬ ವಿಷಯವನ್ನು ಸ್ಪಷ್ಟಪಡಿಸಿದರು.
ಚನ್ನಪಟ್ಟಣದಿಂದಲೂ ತಾವು ಚುನಾವಣಾ ಕಣಕ್ಕಿಳಿಯುವ ವಿಷಯ ಕೇವಲ ಒಂದು ವದಂತಿಯಷ್ಟೇ. ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ತಮಗೇನೂ ಸೋಲಿನ ಭೀತಿ ಇಲ್ಲ. ವಿರೋಧ ಪಕ್ಷಗಳು ಮಾಡುವ ಇಂಥಾ ಆರೋಪಗಳಿಗೆಲ್ಲಾ ಸೊಪ್ಪು ಹಾಕುವ ಜಾಯಮಾನವೂ ತಮ್ಮದಲ್ಲ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ತಿಳಿಸಿದರು.
ಮಹಿಳಾ ಅಭ್ಯರ್ಥಿಯ ಎದುರು ಕುಮಾರಸ್ವಾಮಿ ಸೋಲುತ್ತಾರೆ ಎಂಬ ಜ್ಯೋತಿಷಿಗಳ ಅಭಿಪ್ರಾಯದ ಅನುಸಾರ ರಾಮನಗರದಲ್ಲಿ ಮಮತಾ ನಿಚ್ಚಾನಿಯವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಇದರಿಂದಾಗಿ ಕುಮಾರಣ್ಣ ಚನ್ನಪಟ್ಟಣದಿಂದಲೂ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಹಬ್ಬಿತ್ತು.
|