ಬೆಂಗಳೂರು: ಚುನಾವಣಾ ಕಣದಲ್ಲಿ ಸೆಣೆಸಬೇಕಿದ್ದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ಸಮಯದಲ್ಲಿಯೇ ಅಕ್ಷರಶಃ ಕೈ-ಕೈ ಮಿಲಾಯಿಸುವ ಹಂತ ತಲುಪಿದ್ದು ವರದಿಯಾಗಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಕಾಂಗ್ರೆಸ್‌ನ ಎಚ್.ಎಂ.ರೇವಣ್ಣ, ಕ್ವೀನ್ಸ್ ರಸ್ತೆಯಲ್ಲಿರುವ ಚುನಾವಣಾಧಿಕಾರಿಯವರ ಕಚೇರಿಗೆ ಬರುವಾಗ ಸಮಯದ ವ್ಯತ್ಯಯವಾಗಿತ್ತು. ರೇವಣ್ಣನವರಿಗೆ ಬೆಳಗ್ಗೆ 10.45ರ ಸಮಯವನ್ನು ನಿಗದಿಪಡಿಸಿದ್ದರೆ, ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರಿಗೆ 10.50ರ ಸಮಯ ನಿಗದಿಪಡಿಸಲಾಗಿತ್ತು.
ಆದರೆ ನಿಗದಿತ ಸಮಯಕ್ಕೆ ಬಂದರೂ ರೇವಣ್ಣ ನಾಮಪತ್ರ ಸಲ್ಲಿಸಿರಲಿಲ್ಲ. ಸಮಯ 10.45ನ್ನು ಮೀರುತ್ತಿದ್ದಂತೆಯೇ ಬಿಜೆಪಿ ಬೆಂಬಲಿಗರೂ ಜಮಾವಣೆಗೊಳ್ಳಲಾರಂಭಿಸಿದರು. 10.50ಕ್ಕೆ ಬಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಾಮಪತ್ರ ಸಲ್ಲಿಸಲು ಕಚೇರಿಯೊಳಗೆ ದಾಪುಗಾಲಿಟ್ಟು ಬಂದಾಗ, ನಾನು ಮೊದಲು ಬಂದಿದ್ದು, ನಾನೇ ಮೊದಲು ನಾಮಪತ್ರ ಸಲ್ಲಿಸುವೆ ಎಂದು ರೇವಣ್ಣ ಹೇಳಿದ್ದು ಮಾತಿನ ಚಕಮಕಿಗೆ ಕಾರಣವಾಯಿತು.
ಇದು ಕ್ರಮೇಣ ಎರಡೂ ಪಕ್ಷದ ಕಾರ್ಯಕರ್ತರಿಗೆ ಪ್ರಚೋದನೆ ನೀಡಿದ್ದರಿಂದ ಲಘು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತು. ಆದರೆ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಅನಾಹುತ ತಪ್ಪಿತು. ರಾಹುಕಾಲಕ್ಕೆ ಮುಂಚಿತವಾಗಿ ನಾಮಪತ್ರ ಸಲ್ಲಿಸಿಬಿಡಬೇಕು ಎಂಬ ಸ್ಪಷ್ಟ ನಿರ್ದೇಶನ ಎರಡೂ ಪಕ್ಷಗಳ ವತಿಯಿಂದ ಅಭ್ಯರ್ಥಿಗಳಿಗೆ ಬಂದಿದ್ದರಿಂದ ಈ ಗೊಂದಲ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
|