ಬಹುಜನ ಸಮಾಜವಾದಿ ಪಕ್ಷಕ್ಕೀಗ ತಾರಾ ವರ್ಚಸ್ಸು. ಚಲನಚಿತ್ರ ಕಲಾವಿದರಾದ ಜೈಜಗದೀಶ್ ಮತ್ತು ಹೇಮಾಶ್ರೀಯವರುಗಳು ಬಿಎಸ್ಪಿ ವತಿಯಿಂದ ನಾಮಪತ್ರ ಸಲ್ಲಿಸುವುದರೊಂದಿಗೆ ಬಹುಜನ ಸಮಾಜವಾದಿ ಪಕ್ಷವೀಗ ಕಳೆಕಳೆಯಾಗಿದೆ.
ಜೈಜಗದೀಶ್ ಕಳೆದ ಮೂರೂವರೆ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಅಭಿನಯದಲ್ಲಷ್ಟೇ ಅಲ್ಲದೇ, ಇತ್ತೀಚೆಗಷ್ಟೇ ಮದನ ಎಂಬ ಚಿತ್ರವನ್ನು ನಿರ್ದೇಶಿಸಿದರಾದರೂ ಅದು ಯಶಸ್ಸು ಕಾಣಲಿಲ್ಲ. ಈಗ ಮತ್ತೊಂದು ಪ್ರಯತ್ನವಾಗಿ ರಾಜಕೀಯ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಅವರ ತವರೂರಾದ ಮಡಿಕೇರಿಯಲ್ಲಿಯೇ ನಾಮಪತ್ರವನ್ನು ಜೈಜಗದೀಶ್ ಸಲ್ಲಿಸಿದ್ದು, ಚುನಾವಣೆಯಲ್ಲಿ ಜಯಶಾಲಿಯಾಗಲು ಅವರ ತಾರಾವರ್ಚಸ್ಸು ಎಷ್ಟರಮಟ್ಟಿಗೆ ನೆರವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನು ಸುವರ್ಣ ವಾಹಿನಿಯ ಸೀರೆಗೊಂದು ಸವಾಲ್ ಕಾರ್ಯಕ್ರಮದ ನಿರೂಪಕಿ ಹೇಮಾಶ್ರೀ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮೂಲತಃ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಸಹಳ್ಳಿಯವರಾದ ಈಕೆಗೆ ತಮ್ಮದೇ ಬಲಿಜ ಜನಾಂಗಕ್ಕೆ ಸೇರಿದ ಸುಮಾರು 25 ಸಾವಿರ ಮತಗಳು ಹಾಗೂ ದಲಿತ ಸಮುದಾಯದ ಸುಮಾರು 45 ಸಾವಿರ ಮತಗಳು ಶ್ರೀರಕ್ಷೆಯಾಗಲಿವೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಸದ್ಯಕ್ಕೆ ಕಿರುತೆರೆ-ಹಿರಿತೆರೆಗಳಿಂದ ತಾತ್ಕಾಲಿಕ ನಿವೃತ್ತಿ ಪಡೆದು ಪ್ರಚಾರಕ್ಕಿಳಿದಿರುವ ಆಕೆ ಚುನಾವಣೆಯಲ್ಲಿ ಠೇವಣಿ ಉಳಿದರೆ ಸಾಕು ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಅದರೆ ಜಾತಿವಾರು ಲೆಕ್ಕಾಚಾರ ಹಾಗೂ ರಾಜಕೀಯವನ್ನು ಗಮನಿಸಿದವರು ಹೇಮಾಶ್ರೀ ಎದುರಾಳಿಗಳಿಗೆ ಸಾಕಷ್ಟು ಫೈಟ್ ನೀಡಲಿದ್ದಾರೆ ಎಂದು ನುಡಿಯುತ್ತಿದ್ದಾರೆ.
|