ನಂಜನಗೂಡು: ತನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ತತ್ವ-ಸಿದ್ಧಾಂತವನ್ನು ನಂಬಿಕೊಂಡು ಬಂದಿದೆ. ಚುನಾವಣೆ ನಡೆಯುವ ಮೊದಲೇ ಮುಖ್ಯಮಂತ್ರಿಯನ್ನು ಘೋಷಿಸುವಂತಹ ಪಕ್ಷ ನಮ್ಮದಲ್ಲ ಎಂದ ಅವರು ಮುಖ್ಯಮಂತ್ರಿ ಯಾರು ಆಗಬೇಕೆಂಬುದನ್ನು ಸೋನಿಯಾಗಾಂಧಿ ನಿರ್ಧರಿಸುತ್ತಾರೆ ಎಂದು ಹೇಳಿದರು.
ನಮ್ಮದು ದೊಡ್ಡ ಪಕ್ಷ. ದೊಡ್ಡ ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯ ಸಾಮಾನ್ಯ. ಆದರೆ ನಾವು ಅವೆಲ್ಲವನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದ ಅವರು, ಒಂದು ಸುಭದ್ರ ಸರ್ಕಾರವನ್ನು ಕಾಂಗ್ರೆಸ್ ಮಾತ್ರ ನೀಡಬಲ್ಲದು. ಈ ಬಾರಿ ಕಾಂಗ್ರೆಸ್ ಬಹುಮತದಿಂದ ಗೆದ್ದು ಬರುವ ವಿಶ್ವಾಸ ನಮಗಿದೆ ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಟೀಕಿಸುತ್ತಾ, ಮತದಾರರು ದೇವೇಗೌಡರು ಹೇಳಿದಂತೆ ಕೇಳಲು ಅವರ ಜೇಬಿನಲಿಲ್ಲ. ಇಂದಿನ ಮತದಾರ ಬುದ್ಧಿವಂತ. ಯಾವ ಪಕ್ಷಕ್ಕೆ ಮತ ಹಾಕಿದರೆ ಉತ್ತಮ ಎಂಬುದನ್ನು ಅರಿಯುವಷ್ಟು ಆತ ಸಮರ್ಥನಿದ್ದಾನೆ ಎಂದ ಅವರು, ಕುಮಾರಸ್ವಾಮಿ ಸರ್ಕಾರ ಕೆಟ್ಟ ಆಡಳಿತ ನೀಡಿದೆ. ಆದ್ದರಿಂದ ಅವರನ್ನು ಸೋಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದರು.
|