ಬೆಂಗಳೂರು: ಹಿರಿಯೂರು ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಿಲ್ಲವೆಂದು ಆಕ್ರೋಶಗೊಂಡ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿ ಕಿಟಕಿಯ ಗಾಜುಗಳನ್ನು ಪುಡಿ ಮಾಡಿದ್ದಾರಲ್ಲದೆ, ಪೀಠೋಪಕರಣಗಳನ್ನು ಪುಡಿಗೈದಿದ್ದಾರೆ.
ಅದ್ಯೂಕೋ ಕಾಂಗ್ರೆಸ್ ಕಚೇರಿಯ ದೆಸೆ ಸರಿಯಿಲ್ಲವೆಂದು ಕಾಣುತ್ತಿದೆ. ಯಾವತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿತೋ ಅಂದಿನಿಂದ ಕೆಪಿಸಿಸಿ ಕಚೇರಿಗೆ 'ಮುತ್ತಿಗೆ'ಯ ಭಾಗ್ಯ. ಮೊನ್ನೆ ತಾನೇ ಆರ್.ವಿ.ದೇವರಾಜ್ ಹಾಗೂ ಪುಟ್ಟರಾಜು ತಮಗೆ ಟಿಕೆಟ್ ನೀಡಿಲ್ಲ ಎಂದು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದರು.
ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘೇರಾವ್ ಮಾಡಿದ ಕಾರ್ಯಕರ್ತರು ಮಂಜುನಾಥ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಇನ್ನು ಕೆಲವು ಕಾರ್ಯಕರ್ತರು ಕಚೇರಿಯೊಳಗೆ ನೇಣು ಹಾಕಿಕೊಳ್ಳಲು ಮುಂದಾದರು.
ಹೀಗೆ ಕೆಪಿಸಿಸಿ ಕಚೇರಿ ದಿನಾಲೂ ಕಾರ್ಯಕರ್ತರಿಂದ ಬಂಡಾಯದ ಬಿಸಿಯನ್ನು ಎದುರಿಸುತ್ತಿದೆ. ಟಿಕೆಟ್ ಪಡೆಯಲು ಈ ರೀತಿಯ ಮುತ್ತಿಗೆ ಸುಲಭ ಮಾರ್ಗವೆಂದು ಮನಗಂಡ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಾರೆ.
|