ಬೆಂಗಳೂರು: ಬಿಎಸ್ಪಿ ಮೂಲಕ ರಾಜಕೀಯ ಅಂಗಳಕ್ಕೆ ಕಾಲಿರಿಸುತ್ತಿರುವ ಚಿತ್ರ ನಟ ಜೈ ಜಗದೀಶ್, ಮಡಿಕೇರಿ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ಕೆಲವು ಕಾರಣಗಳಿಂದ ತಿರಸ್ಕೃತಗೊಂಡಿದೆ.
ಜೈ ಜಗದೀಶ್‌ಗಿಂತ ಮುಂಚೆ ಬಿಎಸ್ಪಿ ಅಭ್ಯರ್ಥಿಯಾಗಿ ಕೆ.ಎನ್. ವಿಠಲ್ ಪಕ್ಷದ ಬಿ ಫಾರಂ ಸಲ್ಲಿಸಿದ್ದರು. ಆದರೆ ಜೈ ಜಗದೀಶ್ ಇವರಿಗಿಂತ ತಡವಾಗಿ ಸಲ್ಲಿಸಿದರು. ಇದರ ಬಗ್ಗೆ ಜೈ ಜಗದೀಶ್‌ಗೆ ಮಾಹಿತಿ ನೀಡಿದ ಚುನಾವಣಾಧಿಕಾರಿಗಳು ಅಧ್ಯಕ್ಷರ ಸಹಿ ಇರುವ ಮಾರ್ಪಾಡು ಮಾಡಿದ ಬಿ ಫಾರಂನ್ನು ಸಲ್ಲಿಸುವಂತೆ ಹೇಳಿದರು.
ಆದರೆ ಹೀಗೆ ಬಿ ಫಾರಂ ಸಲ್ಲಿಸುವಲ್ಲಿ ಜೈ ಜಗದೀಶ್ ವಿಫಲರಾದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಮೊದಲು ಸಲ್ಲಿಸಿದ್ದ ಕೆ.ಎನ್. ವಿಠಲ್ ಅವರ ನಾಮಪತ್ರವನ್ನು ಅಂಗೀಕರಿಸಲಾಗಿದೆ ಎನ್ನಲಾಗಿದೆ.
ಜೈ ಜಗದೀಶ್ ನಾಮಪತ್ರ ತಿರಸ್ಕೃತಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅಲ್ಲಿನ ಅಧಿಕಾರಿಗಳನ್ನು ಬೈಯ್ದು ಜೈಜಗದೀಶ್ ನಾಮಪತ್ರ ತಿರಸ್ಕೃತಗೊಂಡ ಬಗ್ಗೆ ತಾನು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಅಷ್ಟಕ್ಕೂ ಬಿಎಸ್ಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡರೆ ಬಿಜೆಪಿ ಅಭ್ಯರ್ಥಿಗೆ ಏನು ಚಿಂತೆ ಎಂದು ಮಾತನಾಡಿಕೊಂಡ ಜನರು ಇದರ ಹಿಂದೆ ಬಿಜೆಪಿ ಕೈವಾಡವಿರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
|