ಅಕ್ರಮವಾಗಿ ಆಸ್ತಿ ಗಳಿಸಿ ಲೋಕಾಯುಕ್ತರ ಬಲೆಗೆ ಬಿದ್ದರೆ ಅಂತಹ ಭ್ರಷ್ಟರನ್ನು ತಕ್ಷಣ ಅಮಾನತುಗೊಳಿಸುವ ಅಧಿಕಾರವನ್ನು ಸರ್ಕಾರ ಲೋಕಾಯುಕ್ತರಿಗೆ ನೀಡಿದೆ.
ಸರ್ಕಾರ ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಲೋಕಾಯುಕ್ತರಿಗೆ ಈ ಅಧಿಕಾರ ನೀಡಿದೆ. ಹಿಂದಿನ ಸರ್ಕಾರ (2002) ಲಂಚ ಪಡೆಯುತ್ತಿದ್ದಾಗ ಅಧಿಕಾರಿಗಳು ಸಿಕ್ಕಿಬಿದ್ದರೆ ಅವರನ್ನು ಅಮಾನತು ಮಾಡುವ ಅಧಿಕಾರವನ್ನು ನೀಡಿತ್ತು. ಆದರೆ ಅಕ್ರಮ ಆಸ್ತಿ ಗಳಿಸಿ ಸಿಕ್ಕಿಬಿದ್ದವರನ್ನು ಅಮಾನತು ಮಾಡುವ ಅಧಿಕಾರವನ್ನು ನೀಡಿರಲಿಲ್ಲ.
ಲೋಕಾಯುಕ್ತರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದರು. ಪ್ರತಿ ಸರ್ಕಾರವು ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಹೇಳುತ್ತದೆಯೇ ಹೊರತು ಯಾವುದೇ ಸರ್ಕಾರ ನೀಡಿಲ್ಲ ಎಂದಿದ್ದರು. ಈ ವಿಚಾರನವನ್ನು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರು.
ರಾಜ್ಯಪಾಲರ ಕಾರ್ಯಕಾರಿ ಸಲಹೆಗಾರ ತಾರಕನ್ ನೇತೃತ್ವದ ಸಮಿತಿ ಕಾನೂನು ತಿದ್ದುಪಡಿ ಮಾಡಿ ಈ ಆದೇಶ ನೀಡಿದ್ದಾರೆ. ಇದರಿಂದ ಭ್ರಷ್ಟ ಅಧಿಕಾರಿಗಳ ನಿದ್ದೆ ಕೆಟ್ಟಂತಾಗಿದೆ. ಎರಡು ತಿಂಗಳಲ್ಲಿ ಲೋಕಾಯುಕ್ತರು ನಡೆಸಿದ ದಾಳಿಯಲ್ಲಿ 98 ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆಯಲ್ಲಿ ಸಿಕ್ಕಿಬಿದ್ದಿದ್ದರು.
|