ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿರುವುದನ್ನು ವಿರೋಧಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ, ಕಾಂಗ್ರೆಸ್ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಹೆಲಿಕಾಫ್ಟರ್ ಮೂಲಕ ಮಲ್ಲಿಕಾರ್ಜುನ್ ಅವರಿಗೆ ಬಿ ಫಾರಂ ಕಳುಹಿಸಿಕೊಡಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ದಾವಣಗೆರೆಯ ಉತ್ತರ ಕ್ಷೇತ್ರದಿಂದ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಸಿಗುತ್ತದೆ ಎಂಬುದು ಖಾತರಿಯಾಗಿದ್ದರೂ, ಕೊನೆಯ ಕ್ಷಣದಲ್ಲಿ ಮಲ್ಲಿಕಾರ್ಜುನ್ ಅವರನ್ನು ಬಿಟ್ಟು ನೂರುಲ್ಲಾ ಷರೀಫ್ ಅವರಿಗೆ ಕೊಡಲಾಯಿತು. ಇದರಿಂದ ಆಕ್ರೋಶಗೊಂಡ ಮಲ್ಲಿಕಾರ್ಜುನ್ ಅಭಿಮಾನಿಗಳು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಬೆಳವಣಿಗೆಯಿಂದಾಗಿ, ಕಾಂಗ್ರೆಸ್ ಮುಖಂಡರು ಕೂಡಲೇ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡುವಂತೆ ತಿಳಿಸಿತು ಎನ್ನಲಾಗಿದೆ. ಆದರೆ ಈಗ ಷರೀಫ್ ಮತ್ತು ಮಲ್ಲಿಕಾರ್ಜುನ್ ನಡುವೆ ಗೊಂದಲ ಮೂಡಿದೆ.
ಈ ಮಧ್ಯೆ ಕಾಂಗ್ರೆಸ್ ಕೆಲ ಬಂಡಾಯ ಅಭ್ಯರ್ಥಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಕೋಲಾರದಿಂದ ವರ್ತುಲಾ ಪ್ರಕಾಶ್, ಶಾಂತಿನಗರದಿಂದ ಎಂ. ಮುನಿಸ್ವಾಮಿ ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
|