ವರುಣನ ಆರ್ಭಟ ನಗರದಲ್ಲಿ ಭರ್ಜರಿಯಾಗಿಯೇ ಆಗಿದೆ. ಮಂಗಳವಾರ ರಾತ್ರಿ ಸುಮಾರು ಅರ್ಧಗಂಟೆಗಳ ಕಾಲ ಸುರಿದ ಜಡಿಮಳೆ ನಗರವನ್ನು ಅಸ್ತವ್ಯಸ್ತಗೊಳಿಸಿದೆ. ಸುಮಾರು 35 ಮರಗಳು ಹಾಗೂ 50 ವಿದ್ಯುತ್ ಕಂಬಗಳು ಕುಸಿದು ಬಿದ್ದಿವೆ. ಮರಗಳು ಕೊಂಬೆಗಳು ಮುರಿದು ಬಿದ್ದ ಕಾರಣ ನಗರದ ವಿವಿಧ ರಸ್ತೆಗಳಿಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಅಲ್ಲದೆ, ನಗರದ ಕೆಲ ಭಾಗದಲ್ಲಿ ಆಲಿಕಲ್ಲು ಮಳೆಯೂ ಆಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಈಜೀಪುರದಲ್ಲಿ ನಿರ್ಮಿಸಲಾಗಿದ್ದ 1512 ಶೆಡ್‌ಗಳಲ್ಲಿ 25 ಶೆಡ್‌ಗಳ ಛಾವಣಿ ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಇದರಿಂದ ಸಿಟ್ಟಿಗೆದ್ದ ಅಲ್ಲಿನ ನಿವಾಸಿಗಳು ರಸ್ತೆ ತಡೆ ನಡೆಸಿದ ಕಾರಣ ಕೆಲ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಕೂಡಲೇ ಸ್ಥಳಕ್ಕಾಗಮಿಸಿದ ಬಿಬಿಎಂಪಿ ಹೆಚ್ಚುವರಿ ಆಯುಕ್ತ ಪುಟ್ಟಸ್ವಾಮಿ, ಇದರ ದುರಸ್ತಿ ಕಾರ್ಯವನ್ನು ಬುಧವಾರದಿಂದಲೇ ಆರಂಭಿಸುವುದಾಗಿ ಭರವಸೆ ನೀಡಿದ ನಂತರ ನಿವಾಸಿಗಳು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.
ಅಲ್ಲದೆ, ಮಳೆಯಿಂದಾಗಿ ವಿದ್ಯುತ್ ಕಂಬಗಳು ಕುಸಿದ ಪರಿಣಾಮ ದಕ್ಷಿಣ ಬೆಂಗಳೂರಿನ ಕೆಲ ಭಾಗಗಳ ಜನರು ಕತ್ತಲೆಯಲ್ಲಿಯೇ ಕಾಲ ಕಳೆಯಬೇಕಾಯಿತು. ಗಾಳಿಯ ರಭಸಕ್ಕೆ ಕೋರಮಂಗಲ, ಇಂದಿರಾನಗರದ ಭಾಗಗಳಲ್ಲಿ ಅನೇಕ ಮರಗಳು ಧರೆಗುರುಳಿದ್ದು, ಇದರಿಂದ ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಒಳಗಾದರು.
|