ಕೊನೆಯ ಕ್ಷಣದ ಬದಲಾವಣೆಯಿಂದಾಗಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದಂತಾಗುವ ಪರಿಸ್ಥಿತಿ ತಲೆದೋರಿದೆ.
ಮಂಗಳವಾರ ನಡೆದ ನಾಟಕೀಯ ಬೆಳವಣಿಗೆ ಇದಕ್ಕೆ ಕಾರಣ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಅಕಾಂಕ್ಷಿಗಳು ಬಿ ಫಾರಂ ಪಡೆಯಲು ಸಿದ್ಧರಾಗಿದ್ದರು. ಈ ಸಂದರ್ಭದಲ್ಲಿ ಹೈಕಮಾಂಡ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಸೈಯದ್ ಅವರಿಗೆ ಟಿಕೆಟ್ ನೀಡಲು ಮುಂದಾಗಿತು. ಆದರೆ ಇದನ್ನು ವಿರೋಧಿಸಿದ ಇನ್ನೊರ್ವ ಅಕಾಂಕ್ಷಿ ಮಲ್ಲಿಕಾರ್ಜುನ್ ಬೆಂಬಲಿಗರು ರಾತ್ರೋರಾತ್ರಿ ಗಲಭೆ ಎಬ್ಬಿಸಿದ್ದರು.
ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಕ್ಷಣದಲ್ಲಿ ಹೆಲಿಕಾಪ್ಪರ್ ಮೂಲಕ ಮಲ್ಲಿಕಾರ್ಜುನ್ ಅವರಿಗೆ ಬಿ ಫಾರಂ ಕಳುಹಿಸಲಾಯಿತು. ಇತ್ತ, ತಮಗೆ ನೀಡಲಾಗಿದ್ದ ಬಿ ಫಾರಂ ಅನ್ನು ಕೊನೆ ಗಳಿಗೆಯಲ್ಲಿ ತ್ಯಾಗ ಮಾಡಿದ ಸೈಯದ್ ತಮ್ಮ ಹೆಸರಿನ ಮೇಲೆ ಅಡ್ಡಗೆರೆ ಎಳೆದು ಮಲ್ಲಿಕಾರ್ಜುನ್ ಹೆಸರು ಬರೆದು ಸಲ್ಲಿಸಿದರು.
ಆದರೆ, ಇದು ಇನ್ನೊಂದು ಸಮಸ್ಯೆಗೆ ಕಾರಣವಾಗಿದೆ. ಯಾವುದೇ ಪಕ್ಷ ತನ್ನ ಅಭ್ಯರ್ಥಿಯೆಂದು ಸೂಚಿಸಿದ ವ್ಯಕ್ತಿ ಮಾತ್ರ ಬಿ ಫಾರಂ ಸಲ್ಲಿಸಬಹುದು. ಆದರೆ, ದಾವಣಗೆರೆ ಪ್ರಕರಣದಲ್ಲಿ ಮಲ್ಲಿಕಾರ್ಜುನ್‌ರನ್ನು ಕೆಪಿಸಿಸಿ ಪರಿಗಣಿಸದೇ ಇರುವುದರಿಂದ ಅವರು ಸ್ಪರ್ಧೆಯಿಂದ ವಂಚಿತರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೆ, ಇನ್ನೊಂದು ಮಾಹಿತಿ ಪ್ರಕಾರ, ಸೈಯದ್ ಸಲ್ಲಿಸಿದ ಬಿ ಫಾರಂನಲ್ಲಿ ಸೈಯದ್-ಮಲ್ಲಿಕಾರ್ಜುನ್ ಎಂದು ದಾಖಲಾಗಿದೆ. ಇದರಿಂದ ನಾಮಪತ್ರ ಅನರ್ಹವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
|