ಶೇ.3ರ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಬಿಪಿಎಲ್ ಕಾರ್ಡುದಾರರಿಗೆ ಕಲರ್ ಟಿವಿ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ಶ್ರೀ ಯೋಜನೆ, ಸೇರಿದಂತೆ ಹಲವು ಭರವಸೆಗಳನ್ನೊಳಗೊಂಡ ಪ್ರಣಾಳಿಕೆಯನ್ನು ಕಾಂಗ್ರೆಸ್ ಗುರುವಾರ ಬಿಡುಗಡೆ ಮಾಡಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚೌಹಾಣ್ ನಗರದ ಏಟ್ರಿಯಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರೆ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಸಾಧನೆ ಬಿಂಬಿಸುವ ಆಡಿಯೋ ಕ್ಯಾಸೆಟ್ಟನ್ನು ಬಿಡುಗಡೆ ಮಾಡಿದರು.
ರಾಜ್ಯಾದ್ಯಂತ 24 ಗಂಟೆಗಳ ಕಾಲವೂ ವಿದ್ಯುತ್ ಪೂರೈಕೆ, 2 ರೂ.ಗೆ 25 ಕೆ.ಜಿ. ಅಕ್ಕಿ ವಿತರಣೆ, ಅನುದಾನಿತ ಶಾಲೆಗಳಿಗೂ ಬಿಸಿಯೂಟ ವಿಸ್ತರಣೆ, 5 ವರ್ಷದಲ್ಲಿ ನೀರಾವರಿ ಯೋಜನೆ ಪೂರ್ಣ, ಪ್ರತಿ ಮನೆಗೂ ಶೌಚಾಲಯ ವ್ಯವಸ್ಥೆ ಮೊದಲಾದವುಗಳು ಪ್ರಣಾಳಿಕೆಯ ಪ್ರಮುಖಾಂಶಗಳು.
ಅಲ್ಲದೆ, ನೀರಾವರಿ ಯೋಜನೆಗೆ ಶೇ. 100 ಸಹಾಯಧನ, ವಸತಿ ಯೋಜನೆಗಳಿಗೆ ಸಾಲಮನ್ನಾ, ಹಿಂದುಳಿದ ಹಾಗೂ ಬಡವರಿಗೆ ವಿಶೇಷ ಪ್ಯಾಕೆಜ್, ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ-ಇವು ಇತರ ಅಂಶಗಳಾಗಿವೆ.
ಈ ಮಧ್ಯೆ, ಮಹಿಳೆಯರನ್ನು ಪಕ್ಷದಲ್ಲಿ ಕಡೆಗೆಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವಂತೆ ಇತ್ತ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉತ್ತಮ ಯೋಜನೆಯನ್ನು ನೀಡಿದೆ. ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ಸೌಲಭ್ಯ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಸೇರಿದಂತೆ ಹಲವು ಅಂಶಗಳನ್ನು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸೇರಿಸಿಕೊಂಡಿದೆ.
|