ಕಳೆದ ಚುನಾವಣೆಯಲ್ಲಿ ತಾನು ಮುಖ್ಯಮಂತ್ರಿ ಆಗದಂತೆ ಹಾಗೂ ಕರ್ನಾಟಕದಿಂದ ಹೊರ ಹೋಗುವಂತೆ ಮಾಡಿದ್ದು ಜೆಡಿಎಸ್ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆರೋಪಿಸಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಮಡಿಕೇರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನ್ನ ನೇತೃತ್ವದಲ್ಲಿ 2004ರ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಎದುರಿಸಿತ್ತು. ಆದರೆ ಸ್ಪಷ್ಟ ಬಹುಮತ ಸಿಗದೆ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗಿತ್ತು. ಆದರೆ ಜೆಡಿಎಸ್ ಕುತಂತ್ರದಿಂದ ನನ್ನನ್ನು ಮುಖ್ಯಮಂತ್ರಿಯಾಗಲು ಬಿಡಲಿಲ್ಲ ಎಂದು ವಿವರಿಸಿದರು.
‘ಆ ಬಳಿಕ ನಾನು ರಾಜ್ಯದಲ್ಲಿ ಇದ್ದರೆ ತೊಂದರೆ ಎಂದು ಭಾವಿಸಿದ ಜೆಡಿಎಸ್ ಮುಖಂಡರು, ನನ್ನನ್ನು ಮಹಾರಾಷ್ಟ್ರಕ್ಕೆ ಕಳುಹಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ತನಗೆ ನೀಡಿದ ರಾಜ್ಯಪಾಲ ಹುದ್ದೆಯನ್ನು ಸಂತೋಷದಿಂದ ಒಪ್ಪಿಕೊಂಡೆ’ ಎಂದು ಅವರು ತಿಳಿಸಿದರು.
ಈಗ ಹೈಕಮಾಂಡ್ ಆದೇಶದಂತೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಮತ್ತೆ ರಾಜ್ಯಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಜನತೆ ಸ್ಥಿರ ಸರ್ಕಾರಕ್ಕಾಗಿ ಕಾಂಗ್ರೆಸ್ ಕಡೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
|