ನಮ್ಮಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಾ ಬಂದಿದೆ. ಈಗ ಅಂತಹ ವಂಶಪಾರಂಪರ್ಯ ರಾಜಕಾರಣವನ್ನು ತಪ್ಪಿಸಲು ಮತದಾರರಿಗೆ ಸೂಕ್ತ ಕಾಲ ಬಂದಿದೆ ಎನ್ನುವ ಮೂಲಕ ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್. ಸಿಂಧ್ಯಾ ಅವರು ಎಚ್.ಡಿ. ದೇವೇಗೌಡರನ್ನು ಪರೋಕ್ಷವಾಗಿ ಟೀಕಿಸಿದರು.
ಇಲ್ಲಿನ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಿಂಧ್ಯಾ, ಹೆಚ್ಚಿನ ಎಲ್ಲ ಪಕ್ಷಗಳು ದೀನದಲಿತರನ್ನು, ಅಲ್ಪಸಂಖ್ಯಾತರನ್ನು ಕಡೆಗಣಿಸಿವೆ. ಆದರೆ ಬಿಎಸ್ಪಿ ಮಾತ್ರ ಅವರ ಬಗ್ಗೆ ಕಾಳಜಿ ಹೊಂದಿದೆ. ದೇವೇಗೌಡ ಕುಟುಂಬ ವಿಶ್ವಾಸದಿಂದ ನಂಬಿಸಿ ನಂತರ ಹಿಂದಿನಿಂದ ಚೂರಿ ಹಾಕುತ್ತದೆ ಎಂದು ಆರೋಪಿಸಿದರು.
ಬಿಎಸ್ಪಿ ಎಲ್ಲ ಜಾತಿ, ಧರ್ಮದವರಿಗೆ ಟಿಕೆಟ್ ನೀಡಿದೆ. ಬಿಎಸ್ಪಿ ಆಡಂಬರದ ಪಕ್ಷವಲ್ಲ. ಇದು ಬಡವರ ಪಕ್ಷ. ಮಾಜಿ ಪ್ರಧಾನಿ ಅವರ ಮಕ್ಕಳು ರಾಜಕೀಯದಲ್ಲಿ ಬರುವ ಎಲ್ಲ ಅಧಿಕಾರವನ್ನು ಈಗಾಗಲೇ ಅನುಭವಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಆ ಪಕ್ಷದ ಕಾರ್ಯಕರ್ತರೇ ಮುಂದಾಗಿದ್ದಾರೆ ಎಂದು ಸಿಂಧ್ಯಾ ಹೇಳಿದರು.
ಮುಂದೆ ಮಾತನಾಡಿದ ಅವರು, ಬಿಎಸ್ಪಿ ಪಕ್ಷ ಅಧಿಕಾರಕ್ಕೆ ಬಂದರೆ ಜನತೆಗೆ ಉಚಿತವಾಗಿ ಅಕ್ಕಿ, ಬಟ್ಟೆ ಹಾಗೂ ಔಷಧಗಳನ್ನು ನೀಡಲಾಗುವುದು. ಚುನಾವಣೆಯಲ್ಲಿ ಈ ಬಾರಿ ಬಿಎಸ್ಪಿ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದರು.
|